ಹಾವೇರಿ : ವೈದ್ಯಕೀಯ ಶಿಕ್ಷಣಕ್ಕೆಂದು ಉಕ್ರೇನ್ ಹೋಗಿದ್ದ ನವೀನ್ ಬಾಂವ್ ಸ್ಪೋಟದಿಂದ ಸಾವನ್ನಪ್ಪಿದ್ದಾರೆ. ಅವರ ಮೃತದೇಹ ತರಲು ಸರ್ಕಾರ ಪ್ರಯತ್ನ ಪಡುತ್ತಿದೆ. ಈ ಮಧ್ಯೆ ಮೃತರ ಕುಟುಂಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಆರ್ಥಿಕ ಸಹಾಯ ಮಾಡಿದೆ.
ಇಂದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಕೇರಿ ಗ್ರಾಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿ ಮುಖಂಡರು ಭೇಟಿ ನೀಡಿದ್ದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಮೃತ ವಿದ್ಯಾರ್ಥಿ ನವೀನ್ ತಂದೆ ಶೇಖರ್ ಗೌಡ ಅವರಿಗೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ್ದಾರೆ.
ಮೃತ ನವೀನ್ ಫೋಟೋಗೆ ಹೂವು ಹಾಕಿ ನಮಸ್ಕರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ನವೀನ್ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಹೋಗಿದ್ದರು. ಈ ರೀತಿಯ ಘಟನೆ ಸಂಭವಿಸುತ್ತದೆಯೆಂದು ಯಾರು ಊಹಿಸಿರಲಿಲ್ಲ. ಅದನ್ನ ಈಗ ಶಬ್ಧಗಳಲ್ಲಿ ಹೇಳೋದಕ್ಕೂ ಸಾಧ್ಯವಿಲ್ಲ. ನವೀನ್ ಮೃತದೇಹವನ್ನ ತರೋದಕ್ಕೆ ಅವಿರತ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.