ಬೆಂಗಳೂರು: ಇಂದಿನಿಂದ 10 ದಿನಗಳ ಕಾಲ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇಂದು ಚಾಲನೆ ನೀಡಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಇದು ರಾಜಕೀಯ ಪಾದಯಾತ್ರೆ ಅಷ್ಟೆ. ಐದು ವರ್ಷ ಅವ್ರೇ ಅಧಿಕಾರದಲ್ಲಿದ್ದರು. ಆಗ ಏನನ್ನು ಮಾಡಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಡಿಕೆಶಿ ನೀರಾವರಿ ಸಚಿವರಾಗಿದ್ದರು. ಆಗಲು ಏನು ಮಾಡಲಿಲ್ಲ. ಈ ಸಂಬಂಧ ಕಳೆದ ಮೂರು ವರ್ಷದಿಂದ ಎಲ್ಲಿಯೂ ಚರ್ಚೆಯಾಗಲಿಲ್ಲ.
ಕಾಂಗ್ರೆಸ್ ಪಕ್ಷ ಈ ಪಾದಯಾತ್ರೆಯನ್ನ ಯಾಕೆ ಮಾಡುತ್ತಿದೆ ಅನ್ನೋದು ಈಗಾಗಲೇ ಗೊತ್ತಿದೆ. ಅಧಿಕಾರದಲ್ಲಿದ್ದಾಗ ಸರಿಯಾಗಿ ಡಿಪಿಆರ್ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಡಿಪಿಆರ್ ಮಾಡಿದ್ದರು ಆದ್ರೆ ಅವರಿಗೆ ಬದ್ಧತೆ ಇರಲಿಲ್ಲ. ಚುನಾವಣೆ ಹತ್ತಿರ ಬಂದಿದೆ ಅಂತ ರಾಜಕೀಯ ಪಾದಯಾತ್ರೆ ಮಾಡುತ್ತಿದ್ದಾರೆ. ಬಹುತೇಕ ತಾವು ಕೆಲಸವನ್ನ ಮಾಡಿಲ್ಲ ಎಂಬ ಅಪರಾಧ ಅವರಿಗೆ ಕಾಡುತ್ತಿದೆ. ನೀರಾವರಿ ಯೋಜನೆ ಬಗ್ಗೆ ಬದ್ಧತೆಯಿಂದ ಕೆಲಸ ಮಾಡೋದನ್ನ ಬಿಟ್ಟು, ಜನರನ್ನ ಮರಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.