ಚಿತ್ರದುರ್ಗ, ಜನವರಿ.16. ನಗರದ ದಾವಣಗೆರೆ ರಸ್ತೆ ಮಾರ್ಗದ ಒನ್‍ವೇ ರಸ್ತೆಯಲ್ಲೂ ಡಿವೈಡರ್ ಹಾಕಿದ್ದೀರಿ. ನಗರದಲ್ಲಿ ನಿರ್ಮಿಸಿರುವ ಡಿವೈಡರ್‍ಗಳನ್ನು ತೆರವುಗೊಳಿಸುವ ಬಗ್ಗೆ ವಿಚಕ್ಷಣದಳ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪರಿವೀಕ್ಷಣಾ ವರದಿ ನಂತರ ವರದಿಯಲ್ಲಿ ಸೂಚಿಸಿರುವಂತೆ ಡಿವೈಡರ್ ತೆರವುಗೊಳಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅನಾವಶ್ಯಕ ಡಿವೈಡರ್‍ಗಳ ತೆರವುಗೊಳಿಸಬೇಕು ಎಂಬುದು ಜನರ ಬೇಡಿಕೆಯಾಗಿದ್ದು, ಚುನಾವಣೆ ನೀತಿ ಸಂಹಿತೆ ಬರುವ ಮೊದಲೇ ತೆರವುಕಾರ್ಯ ಆಗಬೇಕು. ಎಲ್ಲೆಲ್ಲಿ ಅವಶ್ಯ ಇದೆಯೋ ಆ ಕಡೆ ಡಿವೈಡರ್‍ಗಳನ್ನು ಉಳಿಸಿಕೊಂಡು, ಅವಶ್ಯ ಇಲ್ಲದಿರುವ ಕಡೆ ಡಿವೈಡರ್ ತೆರವುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ನಿರ್ಮಿಸಲಾಗಿರುವ ಡಿವೈಡರ್‍ಗಳು ನಿಯಮಾನುಸಾರ ಇದೆಯೋ ಇಲ್ಲವೋ ಎಂದು ತನಿಖಾ ತಂಡ ಪರಿಶೀಲಿಸಿದ್ದು, ವರದಿ ಸಲ್ಲಿಸಬೇಕಿದೆ. ವರದಿ ಪರಿಶೀಲನೆ ಬಳಿಕ ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಹೇಳಿದರು.