ಚಿತ್ರದುರ್ಗದಲ್ಲಿ ಡಿವೈಡರ್ ತೆರವುಗೊಳಿಸಿ ಫುಟ್‍ಪಾತ್ ನಿರ್ಮಿಸಿ : ಕರುನಾಡ ವಿಜಯಸೇನೆ ಒತ್ತಾಯ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.13 : ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಡಿವೈಡರ್ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ವಿಶಾಲವಾದ ರಸ್ತೆ ಹಾಗೂ ಫುಟ್‍ಪಾತ್ ನಿರ್ಮಿಸಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿಯವರ ಗಮನ ಸೆಳೆದು ಚಿತ್ರದುರ್ಗದಲ್ಲಿ ಡಿವೈಡರ್ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡುವಂತೆ ಮನವಿ ಮಾಡಿರುವುದು ಸ್ವಾಗತಾರ್ಹ.

ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಡುವೆ ಸಹಕಾರವಿಲ್ಲದ ಕಾರಣ ಚಿತ್ರದುರ್ಗ ಅಭಿವೃದ್ದಿ ಕಾಣದೆ ಕುಂಠಿತಗೊಳ್ಳುತ್ತಲೆ ಬರುತ್ತಿದೆ.

ಚಳ್ಳಕೆರೆ ಟೋಲ್‍ಗೇಟ್‍ನಿಂದ ಪ್ರವಾಸಿ ಮಂದಿರದವರೆಗೆ ಮಾರ್ಕ್‍ಗೆ ಅನುಗುಣವಾಗಿ ರಸ್ತೆ ಅಗಲೀಕರಣವಾಗಿಲ್ಲ. ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆ, ಮೆದೇಹಳ್ಳಿ ರಸ್ತೆ ಹಾಗೂ ಜೆಸಿಆರ್. ಜೋಗಿಮಟ್ಟಿ ರಸ್ತೆ ಕೂಡ ಗುರುತು ಮಾಡಿದಷ್ಟು ಅಗಲೀಕರಣವಾಗಿಲ್ಲ.

ಎರಡು ಬಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದ್ದರೂ ರಸ್ತೆ ಅಗಲೀಕರಣದಲ್ಲಿ ಆಗಿರುವ ತಾರತಮ್ಯ ಮಾತ್ರ ನಿವಾರಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್.ಬಿ.ಎಂ. ಸರ್ಕಲ್‍ನಲ್ಲಿ ಅವೈಜ್ಞಾನಿಕ ಸಿಗ್ನಲ್‍ಲೈಟ್ ಅಳವಡಿಸಿರುವುದರಿಂದ ವೃದ್ದರು, ಮಹಿಳೆಯರು, ಮಕ್ಕಳು ರಸ್ತೆ ದಾಟುವುದು ಕಷ್ಟವಾಗಿದೆ. ಚಂದ್ರವಳ್ಳಿಯಲ್ಲಿ ವೈಜ್ಞಾನಿಕ ಹಂಪ್ಸ್‍ಗಳಿವೆ.

ತುರುವನೂರು ರಸ್ತೆಯಲ್ಲಿ ಬೈಕ್, ಕಾರ್ ಶೋರೂಂನವರು ರಸ್ತೆ ಅತಿಕ್ರಮಣ ಮಾಡಿಕೊಂಡು ವಾಹನಗಳನ್ನು ನಿಲ್ಲಿಸುವುದರಿಂದ ಓಡಾಟಕ್ಕೆ ಅಡಚಣೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆಯವರು ರಸ್ತೆ, ಫುಟ್‍ಪಾತ್‍ಗಳನ್ನು ನುಂಗಿ ನೀರು ಕುಡಿದಿದ್ದಾರೆಂದು ಕೆ.ಟಿ.ಶಿವಕುಮಾರ್ ಆಪಾದಿಸಿದರು.

ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಜಗದೀಶ್ ಸಿ. ಸುರೇಶ್, ಅಖಿಲೇಶ್, ಮಹಮದ್ ರಫಿ, ಶಾನ್, ಅವಿನಾಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *