ಸ್ವಚ್ಛತೆಯಿಂದ ಆರೋಗ್ಯ ವೃದ್ಧಿ ಮತ್ತು ದೇಶದ ಅಭಿವೃದ್ಧಿ | ಅಮೃತಾಪುರದಲ್ಲಿ ಸ್ವಚ್ಛ ಭಾರತ ಅಭಿಯಾನ

suddionenews
1 Min Read

 

ಸುದ್ದಿಒನ್, ಹೊಳಲ್ಕೆರೆ, ಸೆಪ್ಟೆಂಬರ್.27  : ಹಣ ಆಸ್ತಿ ಅಧಿಕಾರ ಭಾಗ್ಯಗಳಿಗಿಂತ ಆರೋಗ್ಯವೇ ಶ್ರೇಷ್ಠ ಭಾಗ್ಯವಾಗಿದೆ. ಆರೋಗ್ಯವಿದ್ದರೆ ಉಳಿದೆಲ್ಲ ಭಾಗ್ಯಗಳ ಪಡೆಯಬಹುದು. ನಮ್ಮ ಪರಿಸರ ಸ್ವಚ್ಛತೆಯಿಂದ ಆರೋಗ್ಯದ ವೃದ್ಧಿಯಾಗುವುದು. ಆರೋಗ್ಯ ವೃದ್ಧಿಯಿಂದ ದೇಶದ ಅಭಿವೃದ್ಧಿಯೂ ಸಾಧ್ಯ ಎಂದು ಶಿಕ್ಷಕ ಟಿ.ಪಿ.ಉಮೇಶ್ ಹೇಳಿದರು.

ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛ ಭಾರತ ಅಭಿಯಾನ-ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ವೈಯುಕ್ತಿಕ ಸ್ವಚ್ಛತೆಯ ಜೊತೆಗೆ ನಮ್ಮ ಶಾಲೆಯ ಒಳ ಹೊರಗೆ, ವಾಸಿಸುವ ಮನೆಯ ಸುತ್ತಮುತ್ತ ಸದಾ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ, ಹಸಿಕಸ ಒಣಕಸ ರಾಸಾಯನಿಕ ಕಸಗಳನ್ನು ಸೂಕ್ತವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ನಮ್ಮ ಗ್ರಾಮವನ್ನು ಸ್ವಚ್ಚ ಗ್ರಾಮವಾಗಿ ಪರಿವರ್ತಿಸಬಹುದು. ಎಲ್ಲ ಗ್ರಾಮ ನಗರಗಳ ಸ್ವಚ್ಛತೆಯಿಂದ ತ್ಯಾಜ್ಯ ಮುಕ್ತ ದೇಶವಾಗಿ ಭಾರತ ಸ್ವಚ್ಛ ದೇಶವಾಗುವುದು.

ಸ್ವಚ್ಚತೆಯಿಂದ ಜನರ ಆರೋಗ್ಯಮಟ್ಟ ಸುಧಾರಣೆಯಾಗಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುವುದು. ಅಲ್ಲದೆ ಸ್ವಚ್ಛತೆಯುಳ್ಳ ದೇಶದ ಪ್ರವಾಸಿ ಪ್ರೇಕ್ಷಣೀಯ ತಾಣಗಳಿಗೆ ಹೊರದೇಶದ ನಾಗರೀಕರು ಆಗಮಿಸುವುದರಿಂದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಊಡಲು ಉದ್ಯಮಿಗಳು ಆಸಕ್ತಿ ತೋರುವುದರಿಂದ ನಮ್ಮ ಜನರಿಗೆ ಉದ್ಯೋಗ ಸೌಲಭ್ಯ ಹೆಚ್ಚಿ ಆರ್ಥಿಕ ಪ್ರಗತಿಯೂ ಸಾಧ್ಯವಾಗಿ ದೇಶ ಅಭಿವೃದ್ಧಿಯೆಡೆ ಸಾಗುವುದು. ನಮ್ಮ ಜೀವನದ ಮೊದಲ ಧ್ಯೇಯ ಸ್ವಚ್ಛತೆಯ ಕಾಪಾಡುವುದೆ ಆಗಬೇಕು ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಡಿ.ಸಿದ್ದಪ್ಪರವರು ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ ಕಾರ್ಯಕ್ರಮದ ಪ್ರತಿಜ್ಞಾ ವಿಧಿ ಬೋಧಿಸಿ ಅಕ್ಟೋಬರ್ 2 ರಂದು ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ ಸ್ವಚ್ಛ ಭಾರತ ದಿನವನ್ನಾಗಿ ಆಚರಿಸುವೆವು. ಅದರ ಪೂರ್ವ ತಯಾರಿಯಾಗಿ ಇಂದು ಸ್ವಚ್ಛತೆಯ ಪ್ರತಿಜ್ಞಾ ವಿಧಿ ಸಂಕಲ್ಪ ಮಾಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಚಂದ್ರಪ್ಪ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *