ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಜು.03): ನಗರದ ಪ್ರಮುಖ ರಸ್ತೆಯಲ್ಲಿನ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ವಿವಿಧ ಅಧಿಕಾರಿಗಳೊಂದಿಗೆ ಸೋಮವಾರದಂದು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಡಿವೈಡರ್‍ಗಳಿಂದ ಉಂಟಾಗಿರುವ ಸಮಸ್ಯೆಗಳು, ಟ್ರಾಫಿಕ್ ಸಮಸ್ಯೆ ಕುರಿತಂತೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ತ್ರೈಮಾಸಿಕ ಪರಿಶೀಲನಾ ಸಭೆಯಲ್ಲಿ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಅವರಿಂದ ಪ್ರಸ್ತಾಪಿಸಲಾಗಿತ್ತು.
ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ನಿರ್ದೇಶನ ನೀಡಿದ್ದರು, ಅಲ್ಲದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಕೂಡ, ತ್ವರಿತಗತಿಯಲ್ಲಿ ಅಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಗರದಲ್ಲಿ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗಿನ ಪ್ರದೇಶದಲ್ಲಿ ಪ್ರಮುಖ ರಸ್ತೆಗೆ ಅಳವಡಿಸಲಾಗಿರುವ ಡಿವೈಡರ್ ಬಗ್ಗೆ ಪರಿಶೀಲನೆ ನಡೆಸಿದರು.
ಅಲ್ಲದೆ ಈ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ಪರಿಹರಿಸುವ ಕುರಿತಂತೆಯೂ ಪರಿಶೀಲನೆ ನಡೆಸಿದರು. ಇದು ನಗರದ ಪ್ರಮುಖ ರಸ್ತೆಯಾಗಿರುವುದರಿಂದ, ವಿವಿಧ ನಗರಗಳಿಗೆ ಸಂಚರಿಸುವ ಬಸ್‍ಗಳು, ವಾಹನಗಳು, ಅಲ್ಲದೆ ಆಟೋ, ಕಾರು, ದ್ವಿಚಕ್ರ ವಾಹನ ಸವಾರರಿಗೆ ಟ್ರಾಫಿಕ್‍ನ ತೀವ್ರ ಸಮಸ್ಯೆ ಆಗುತ್ತಿರುವ ಬಗ್ಗೆ ಹಾಗೂ ಉಭಯ ಬದಿಯಲ್ಲಿನ ಪಾರ್ಕಿಂಗ್ ಸಮಸ್ಯೆಯ ಬಗ್ಗೆಯೂ ಪರಿಶೀಲನೆ ನಡೆಸಿದರು.
ಬಳಿಕ ನಗರದ ಜೆಸಿಆರ್ ಬಡಾವಣೆಯ ಪ್ರಮುಖ ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳ ಪ್ರದೇಶಗಳಿಗೂ ಭೇಟಿ ನೀಡಿ, ಡಿವೈಡರ್ ಹಾಗೂ ಪಾರ್ಕಿಂಗ್ ಸಮಸ್ಯೆಯ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಕೆ., ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.