ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 03 : : ಕಟ್ಟಡ ಕಾರ್ಮಿಕ ಕಾನೂನು-1996 ಹಾಗೂ ಸೆಸ್ ಕಾನೂನುಗಳನ್ನು ಮರು ಸ್ಥಾಪಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು
ಸಿಡಬ್ಲ್ಯುಎಫ್ಐ.ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕಾರ್ಮಿಕ ಸಚಿವ ಸಂತೋಷ್ಲಾಡ್ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್ಪೀರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತಾಗಿ ಸಚಿವ ಸಂಪುಟ ಸಭೆ ಕರೆದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ತಿರಸ್ಕರಿಸಬೇಕು. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಸೆಸ್ ಹಣ ನಿಜವಾದ ಕಟ್ಟಡ ಕಾರ್ಮಿಕರ ಕಷ್ಟಕ್ಕೆ ಉಪಯೋಗವಾಗುತ್ತಿಲ್ಲ. ಬಡವರ ಬಿಪಿಎಲ್. ಕಾರ್ಡ್ಗಳನ್ನು ರದ್ದುಪಡಿಸುತ್ತಿರುವ ರಾಜ್ಯ ಸರ್ಕಾರ ಸಿರಿವಂತರು ಹೊಂದಿರುವ ಬಿಪಿಎಲ್. ಕಾರ್ಡ್ಗಳನ್ನು ಏಕೆ ರದ್ದುಪಡಿಸುತ್ತಿಲ್ಲ. ಕೂಡಲೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಬೆದರಿಕೆ ಹಾಕಿದರು.
ಕಟ್ಟಡ ಕಾರ್ಮಿಕರು ಮನೆಗಳನ್ನು ಕಟ್ಟಿಕೊಳ್ಳಲು ಐದು ಲಕ್ಷ ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮ ಮಾಡಬೇಕು. ಹದಿನಾರು ವರ್ಷದ ಮಕ್ಕಳು ಕೂಡ ಕಟ್ಟಡ ಕಾರ್ಮಿಕರೆಂದು ನೊಂದಣಿ ಮಾಡಿಸಿಕೊಳ್ಳಬಹುದೆಂದು ಕೇಂದ್ರ ಸರ್ಕಾರ ಆದೇಶಿಸಿರುವುದು ಅತ್ಯಂತ ಅಪಾಯಕಾರಿ. ಇದರಿಂದ ಬಾಲ ಕಾರ್ಮಿಕರ ಸಂಖ್ಯೆ ಜಾಸ್ತಿಯಾದಂತಾಗುತ್ತದೆ. ಕಾರ್ಮಿಕ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಸಾಮಾಜಿಕ ಸುರಕ್ಷತಾ ಸಂಹಿತೆ ಕಲಂ 7 ಮೊದಲ ಬಾರಿಗೆ ಮಂಡಳಿಗೆ ಕೇಂದ್ರ ಸರ್ಕಾರದಿಂದ ಪ್ರತಿನಿಧಿಯನ್ನು ನೇಮಿಸಿ ಸೂಪರ್ಸೀಡ್ ಮಾಡುವ ಅಧಿಕಾರ ನೀಡಿದೆ. ರಾಜ್ಯ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದೆಂದು
ಸಿ.ಕೆ.ಗೌಸ್ಪೀರ್ ಆಗ್ರಹಿಸಿದರು.
ಮಲ್ಲಿಕಾರ್ಜುನ್, ಅಬ್ದುಲ್ಲಾ, ರಂಗಸ್ವಾಮಿ, ಧರ್ಮರಾಜ, ಕಂಪಳಪ್ಪ, ರಶೀದ್, ಸಣ್ಣಮ್ಮ, ನಾಗಮ್ಮ, ಶಾಂತಮ್ಮ, ವಿನೋದಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




