ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿ.ಐ.ಟಿ.ಯು, ಸಿ.ಡಬ್ಲ್ಯೂ,ಎಫ್,ಐ. ಪ್ರತಿಭಟನೆ

suddionenews
2 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ನ.30) : ಕೋವಿಡ್ ಲಾಕ್‍ಡೌನ್ ಪರಿಹಾರವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಮೂರು ಸಾವಿರ ರೂ.ಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಪರಿಹಾರ ಕೂಡಲೆ ತಲುಪುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿ.ಐ.ಟಿ.ಯು.ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್ ಮಾತನಾಡಿ ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟರ್ ಕಿಟ್ ಖರೀಧಿಯಲ್ಲಿ ಪಾರದರ್ಶಕತೆ ಕಾಪಾಡದಿರುವುದು. ಮಂಡಳಿಯ ನಿಯಮಾವಳಿ, ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಕಾರ್ಮಿಕ ಇಲಾಖೆ ನಿರ್ದೇಶನ ಉಲ್ಲಂಘನೆಯಾಗಿರುವುದನ್ನು ತನಿಖೆ ನಡೆಸುವಂತೆ ಒತ್ತಾಯಿಸಿದರು.

ವೈದ್ಯಕೀಯ ಸಹಾಯಧನವನ್ನು ಐದು ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಮದುವೆ ಸಹಾಯ ಧನ ವಿಳಂಭ ಮತ್ತು ಬಾಂಡ್ ವಿತರಣೆಯಲ್ಲಾಗುತ್ತಿರುವ ವ್ಯತ್ಯವನ್ನು ಸರಿಪಡಿಸಿ. ಸಹಜ ಮರಣದ ಪರಿಹಾರ ಮೊತ್ತವನ್ನು ಎರಡು ಲಕ್ಷ ರೂ.ಗಳಿಗೆ ಏರಿಸಬೇಕು. ಅಪಘಾತದಲ್ಲಿ ಮೃತಪಟ್ಟವರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಹತ್ತು ಲಕ್ಷ ರೂ.ಗಳಿಗೆ ಏರಿಸಬೇಕು. ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ನೀಡಬೇಕು. ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ.ಗಳ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ ಎರಡು ವರ್ಷಗಳಿಂದಲೂ ಜಿಲ್ಲೆಯಲ್ಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಸರ್ಕಾರಿ ಕಟ್ಟಡ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಖಾಸಗಿಯಾಗಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಹೊರ ರಾಜ್ಯದಿಂದ ಬರುವ ಗುತ್ತಿಗೆದಾರರು ಅಲ್ಲಿಂದಲೇ ಕಾರ್ಮಿಕರನ್ನು ಕರೆ ತರುವುದರಿಂದ ನಮ್ಮ ಜಿಲ್ಲೆಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ.

ಚಿತ್ರದುರ್ಗ ಕಾರ್ಮಿಕ ಇಲಾಖೆಯಲ್ಲಿ ಜೇಷ್ಟತೆ ಪರಿಪಾಲನೆ ಮಾಡದಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರತಿ ತಾಲ್ಲೂಕಿನಲ್ಲಿಯೂ ಕಾರ್ಮಿಕ ನಿರೀಕ್ಷಕರನ್ನು ನೇಮಕ ಮಾಡಬೇಕು. ಜಿಲ್ಲೆಯಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ದಲ್ಲಾಳಿಗಳ ಕಾಟ ಜಾಸ್ತಿಯಾಗಿರುವುದನ್ನು ನಿಯಂತ್ರಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕಟ್ಟಡ ಕಾರ್ಮಿಕರ ಸಂಘಟನೆಗಳ ಮುಖಂಡರ ಸಭೆ ಕರೆಯಬೇಕು ಎಂದು ಮನವಿ ಮಾಡಿದರು.

ಕಟ್ಟಡ ಕಾರ್ಮಿಕರ ಸಮಿತಿ ಜಿಲ್ಲಾಧ್ಯಕ್ಷ ಬಿ.ಸಿ.ನಾಗರಾಜಚಾರಿ, ಮಹಿಳಾ ಅಧ್ಯಕ್ಷೆ ಶ್ರೀಮತಿ ಸಣ್ಣಮ್ಮ, ಶೇಖ್ ಕಲೀಂಉಲ್ಲಾ, ಜಿಕ್ರಿಯಾ, ದೇವರಾಜ್, ಸಮೀವುಲ್ಲಾ, ತಿಪ್ಪೇಸ್ವಾಮಿ, ಸೈಯದ್ ಖಲಂದರ್, ದೇವಿ ಕರಿಯಪ್ಪ, ಗಿರಿಜಮ್ಮ, ರವಿಕುಮಾರ್, ಬಿ.ಸಿ.ಭಾಸ್ಕರಚಾರಿ, ಕೃಷ್ಣಪ್ಪ, ರಾಘವೇಂದ್ರ, ಸಣ್ಣ ಈರಪ್ಪ, ಅಬ್ದುಲ್, ರಶೀದ್, ಡಾರ್ಜನ್ ರಾಜ, ಮಲ್ಲಿಕಾರ್ಜುನ್, ದ್ಯಾಮಕ್ಕ, ಹನುಮಂತ, ಮುಮ್ತಾಜ್, ಕುಮಾರ್, ಗಂಗಾಧರ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *