ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಚಿತ್ರರಂಗ ಕಳೆದುಕೊಂಡಿದ್ದು ಮಾತ್ರ ದೊಡ್ಡದೊಡ್ಡವರನ್ನೇ. ಇದೀಗ ಮತ್ತೊಬ್ಬ ಶ್ರೇಷ್ಠ ನಿರ್ದೇಶಕನನ್ನ ಕಳೆದುಕೊಂಡು ಮಂಕಾಗಿದೆ. ನಿರ್ದೇಶಕ ಕೆ ವಿ ರಾಜು ಇಂದು ಎಲ್ಲರನ್ನ ಅಗಲಿದ್ದಾರೆ.
ಕೆ ವಿ ರಾಜು ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ, ರೈಟರ್ ಹಾಗೂ ಡೈಲಾಗ್ ರೈಟರ್ ಆಗಿದ್ದವರು. 1982ರಲ್ಲಿ ಚಿತ್ರರಂಗಕ್ಕೆ ಬಂದವರು ಮೊದಲ ಬಾರಿಗೆ ಬಾಡದ ಹೂ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಲವೇ ಬದುಕು ಸಿನಿಮಾವನ್ನ ಮೊದಲ ಬಾರಿಗೆ ನಿರ್ದೇಶಿಸದ್ರು. ಅಲ್ಲಿಂದ ಒಂದಾದ ಮೇಲೆ ಒಂದರಂತೆ ಹಿಟ್ ಚಿತ್ರಗಳನ್ನೇ ಕೊಡುತ್ತಾ ಹೋದ್ರು.
ಯುದ್ಧಕಾಂಡ, ಬೆಳ್ಳಿಕಾಲುಂಗರ, ಬೆಳ್ಳಿ ಮೋಡಗಳು ಸೇರಿದಂತೆ ಹಲವಾರು ಸಿನಿಮಾ ನಿರ್ದೇಶಿಸಿದರು. ಅಷ್ಟೇ ಅಲ್ಲ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ನಟನೆಯ ಇಂದ್ರಜಿತ್ ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು. ಬಳಿಕ ಮತ್ತೆರಡು ಸಿನಿಮಾಗಳನ್ನ ಬಾಲಿವುಡ್ ಪ್ರಿಯರಿಗೆ ನೀಡಿದ್ದವರು.
ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. ಜಗ್ಗೇಶ್, ಶಶಿಕುಮಾರ್, ದೇವರಾಜ್ ಸೇರಿದಂತೆ ಅನೇಕರನ್ನ ಸೂಪರ್ ಸ್ಟಾರ್ ಮಾಡಿದ್ದು ಇವರ ಸಿನಿಮಾಗಳೇ. 2011ರ ರಾಜಧಾನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಇಂದು ಎಲ್ಲರನ್ನ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.