ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, ಸುದ್ದಿಒನ್, (ಆ.27): ಮಹಿಳೆಯರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಮಾಜಿ ಸಚಿವ ಶಾಸಕ ಪ್ರಿಯಾಂಕ ಖರ್ಗೆ ಇದುವರೆವಿಗೂ ಕ್ಷಮೆ ಕೇಳಿಲ್ಲ. ಹಾಗಾಗಿ ಅವರ ವಿರುದ್ದ ಚಿತ್ತಾಪುರ ಚಲೋ ಹಮ್ಮಿಕೊಳ್ಳಲಾಗುವುದೆಂದು ಬಿಜೆಪಿ.ಜಿಲ್ಲಾಧ್ಯಕ್ಷೆ ಶ್ರೀಮತಿ ಶೈಲಜಾರೆಡ್ಡಿ ತಿಳಿಸಿದರು.
ಬಿಜೆಪಿ.ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ಸರ್ಕಾರಿ ನೌಕರಿ ಬೇಕಾದರೆ ಮಂಚ ಏರಬೇಕು ಎಂದು ಇಡೀ ಮಹಿಳಾ ಕುಲಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ವಿರುದ್ದ ಕಳೆದ ಹದಿನೆಂಟರಂದು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ರಾಜ್ಯಾದ್ಯಂತ ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರೂ ಬಹಿರಂಗವಾಗಿ ಕ್ಷಮೆ ಕೇಳದಿರುವುದು ನಮ್ಮ ಮನಸ್ಸಿಗೆ ಅತೀವ ನೋವುಂಟು ಮಾಡಿದೆ. ಇನ್ನೆರಡು ಮೂರು ದಿನಗಳಲ್ಲಿ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಎಲ್ಲಾ ಮಂಡಲ ಹಾಗೂ ಜಿಲ್ಲೆಗಳಿಂದ ಚಿತ್ತಾಪುರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಸಿದರು.
ಪ್ರಿಯಾಂಕ ಖರ್ಗೆ ಕುಟುಂಬದಲ್ಲಿ ಯಾರೂ ಮಹಿಳೆಯರು ನೌಕರಿ ಮಾಡುತ್ತಿಲ್ಲವೆ? ಎಂದು ಪ್ರಶ್ನಿಸಿದ ಶೈಲಜಾರೆಡ್ಡಿ ರಾಜಕೀಯದಿಂದ ಹಿಡಿದು ಎಲ್ಲಾ ರಂಗಗಳಲ್ಲಿಯೂ ಮಹಿಳೆ ದುಡಿಯುತ್ತಿದ್ದಾಳೆ. ಹಾಗಾಂತ ಎಲ್ಲದಕ್ಕೂ ಮಂಚ ಏರಬೇಕಾದರೆ ಯಾವ ಮಹಿಳೆಯೂ ಮನೆಯಿಂದ ಹೊರಬರಲು ಇಷ್ಟಪಡುವುದಿಲ್ಲ. ಪ್ರಿಯಾಂಕ ಖರ್ಗೆಯ ಮಾತು ಮಹಿಳೆಯರ ಆತ್ಮಗೌರಕ್ಕೆ ಧಕ್ಕೆಯನ್ನುಂಟು ಮಾಡಿದೆ. ಸೇವಾ ಮತ್ತು ಸಮರ್ಪಣಾ ಮನೋಭಾವನೆಯಿಂದ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಾವುಗಳು ಜೀವದ ಹಂಗು ತೊರೆದು ಬಡವರಿಗೆ ಫುಡ್‍ಕಿಟ್, ಮಾಸ್ಕ್ ವಿತರಿಸಿದ್ದೇವೆ. ಮುಂದಿನ ತಿಂಗಳು ಪ್ರಧಾನಿ ಮೋದಿರವರ ಹುಟ್ಟುಹಬ್ಬವಿರುವುದರಿಂದ ಅನೇಕ ಜನೋಪಯೋಗಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಹೇಳಿದರು.
ಬಿಜೆಪಿ.ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಕಾರ್ಯದರ್ಶಿಗಳಾದ ಭಾರತಿ ಹರೀಶ್, ಪಾರ್ವತಮ್ಮ, ವಕ್ತಾರ ನಾಗರಾಜ್‍ಬೇದ್ರೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.