ಚಿತ್ರದುರ್ಗ : ಯಳಗೋಡು ಗ್ರಾಮ ಪಂಚಾಯಿತಿ ಕ್ಷಯಮುಕ್ತ

3 Min Read

 

ಚಿತ್ರದುರ್ಗ. ಮೇ.18: ಚಿತ್ರದುರ್ಗ ತಾಲ್ಲೂಕಿನ ಯಳಗೋಡು ಗ್ರಾಮ ಪಂಚಾಯಿತಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಣೆ ಆಗಲು ಗ್ರಾಮ ಪಂಚಾಯಿತಿ  ಕಾಳಜಿ, ಬದ್ಧತೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಓ.ಸುಧಾ ಹೇಳಿದರು.

ತಾಲ್ಲೂಕಿನ ಯಳಗೋಡು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕ್ಷಯಮುಕ್ತ ಭಾರತ ಅಭಿನಂದನಾ ಕಾರ್ಯಕ್ರಮದಲ್ಲಿ ಯಳಗೋಡು ಗ್ರಾಮ ಪಂಚಾಯಿತಿಗೆ ಕಂಚಿನ ಲೇಪನದ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಮತ್ತು ಅಭಿನಂದನ ಪತ್ರ ವಿತರಿಸಿ ಅವರು ಮಾತನಾಡಿದರು.

 

ಯಳಗೋಡು ಗ್ರಾಮ ಪಂಚಾಯಿತಿ ಕ್ಷಯ ಮುಕ್ತ ಆಗಲು ಈ ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆಗೆ ವರ್ಷಕ್ಕೆ 30 ಜನರು ಕ್ಷಯ ಸಂಶಯಾಸ್ಪದ ರೋಗಿಗಳು ಆಗಿರುತ್ತಾರೆ. ಅವರನ್ನು ಕಫ ಪರೀಕ್ಷೆಗೆ ಒಳಪಡಿಸಿದಾಗ ಶೇ.1 ಕ್ಕಿಂತ ಕಡಿಮೆ ಕ್ಷಯ ರೋಗಿಗಳನ್ನು ಎಲ್ಲರ ಸಹಕಾರದಿಂದ ಕಂಡು ಹಿಡಿದಿದ್ದಾರೆ. ಹಾಗಾಗಿ ಯಳಗೋಡು ಗ್ರಾಮ ಪಂಚಾಯಿತಿಯು ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಿರುತ್ತಾರೆ ಎಂದು ಹೇಳಿದರು.

 

ದೇಶದಲ್ಲಿ ಶೇ.40 ಜನರಿಗೆ ಕ್ಷಯದ ಸೋಂಕು ತಗಲಿರುತ್ತದೆ. ಆದರೆ ಅವರೆಲ್ಲ ಕ್ಷಯ ರೋಗಿಗಳಲ್ಲ. ಕ್ಷಯ ರೋಗದ ಲಕ್ಷಣಗಳು ಕಂಡು ಬಂದರೆ ಆಗ ಮಾತ್ರ ಕ್ಷಯರೋಗಿ ಎಂದು ಗುರುತಿಸಿ, ಅಂತಹವರಿಗೆ ಆರು ತಿಂಗಳ ಉಚಿತ ಚಿಕಿತ್ಸೆಯನ್ನು ನೀಡಿದರೆ ರೋಗವು ಗುಣಮುಖವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

 

ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯೂಲೈ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಇದು ಗಾಳಿಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿರುತ್ತದೆ ಹಾಗೂ ಕ್ಷಯ ರೋಗವು ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹ ಜನರಿಗೆ ಬೇಗನೆ ಹರಡುತ್ತದೆ. ಈ ರೋಗದ ರೋಗ ಲಕ್ಷಣಗಳು ಅಂದರೆ ಜ್ವರ ಬರುವುದು, ಒಂದು ವಾರಕ್ಕಿಂತ ಹೆಚ್ಚು ಕೆಮ್ಮು, ತೂಕ ಕಡಿಮೆಯಾಗುವುದು, ಸಂಜೆ ಹೊತ್ತಿನಲ್ಲಿ ಬೆವರುವುದು, ಜ್ವರ ಕಾಣಿಸುವುದು, ಹಸಿವಾಗದೆ ಇರುವುದು, ಎದೆ ನೋವು, ಕೆಮ್ಮುವಾಗ ಕಫದಲ್ಲಿ ರಕ್ತ ಬೀಳುವುದು ಈ ರೀತಿಯ ಹಲವು ಲಕ್ಷಣಗಳು ಕಂಡು ಬಂದಲ್ಲಿ ಶೀಘ್ರವಾಗಿ ಪರೀಕ್ಷಿಸಿ, ರೋಗ ಪತ್ತೆ ಹಚ್ಚಿದ ತಕ್ಷಣ ಆರು ತಿಂಗಳು ಉಚಿತ ಕ್ಷಯ ಚಿಕಿತ್ಸೆಯನ್ನು ನೀಡುವುದರ ಮುಖಾಂತರ ಕ್ಷಯ ರೋಗವನ್ನು ನಾಶ ಮಾಡಬಹುದು ಎಂದು ತಿಳಿಸಿದರು.

 

ತಂಬಾಕು ಸೇವನೆ ಸಿಗರೇಟು ಮದ್ಯಪಾನ, ಗುಟುಕ ಸೇವಿಸುವ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದು, ಅಂತಹವರಿಗೆ ಈ ರೋಗವು ಬೇಗನೆ ಹರಡುತ್ತದೆ ಮತ್ತು ಮಧುಮೇಹ ಕಾಯಿಲೆ ಇರುವವರೆಗೂ ಹಾಗೂ ಅಪೌಷ್ಟಿಕ ಕೊರತೆಯಿಂದ ಕೂಡ ಬಳಲುತ್ತಿರುವವರು ಬೇಗನೆ ಈ ಕ್ಷಯ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಈ ಮೇಲಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಹಿಂಜರಿಯದೆ ಕಫ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಗ್ರಾಮದ ಒಳಿತಿಗಾಗಿ ಗ್ರಾಮದ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು, ಯಾವುದೇ ಗ್ರಾಮ ಪಂಚಾಯಿತಿ ಸಭೆಯಲ್ಲಿ ಕ್ಷಯರೋಗದ ಬಗ್ಗೆ ಮುಕ್ತವಾಗಿ ಮಾತನಾಡಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಿದರೆ ಮಾತ್ರ ಕ್ಷಯ ಮುಕ್ತ ಭಾರತ ಮಾಡಲು ಸಾಧ್ಯ ಎಂದು ತಿಳಿಸಿದರು. ಇದರಲ್ಲಿ ಸಮುದಾಯದ ಎಲ್ಲಾರ ಪಾತ್ರ ಹೆಚ್ಚಿರುತ್ತದೆ. ಹಾಗೂ ಅಂತರ್ ಇಲಾಖೆಯವರ ಸಹಕಾರ ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ಮಾತನಾಡಿ, ಸಮುದಾಯದ ಪ್ರತಿಯೊಬ್ಬರಿಗೂ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಿ ಕ್ಷಯ ಮುಕ್ತ ಭಾರತ ಮಾಡೋಣ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ನಾಗರಾಜ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಹ್ಲಾದ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ್, ರೆಹಮತ್ ಉಲ್ಲಾ, ಮಹಾಂತೇಶ್, ದಂಡೆಪ್ಪ, ವೆಂಕಟೇಶ್, ತಿಪ್ಪೇಸ್ವಾಮಿ ಮತ್ತು ವೈದ್ಯಾಧಿಕಾರಿ ಅಶ್ವಿನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಸಮುದಾಯ ಆರೋಗ್ಯ ಅಧಿಕಾರಿ ಶಾಲಿನಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಜ್ಯೋತಿ, ವಿಜಯ್ ಕುಮಾರಿ, ಸುನಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ಕುಚೇಲ. ಫಾರ್ಮಸಿ ಅಧಿಕಾರಿ ರಾಮರೆಡ್ಡಿ ಹಾಗೂ ಆಶಾ ಕಾರ್ಯಕರ್ತರು, ಗ್ರಾಮದ ಮುಖಂಡರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks