ಸುದ್ದಿಒನ್, ಚಿತ್ರದುರ್ಗ. ನ.28: 2022-23ನೇ ಸಾಲಿನ ಪೊಲೀಸ್ ಕಾನ್ಸ್‍ಟೇಬಲ್ (ಸಿವಿಲ್)-454 ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ಡಿಸೆಂಬರ್ 10ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ರವರೆಗೆ ಚಿತ್ರದುರ್ಗ ನಗರದಲ್ಲಿ ಒಟ್ಟು 8 ಶಾಲಾ, ಕಾಲೇಜುಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.
ಚಿತ್ರದುರ್ಗ ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 400 ಅಭ್ಯರ್ಥಿಗಳು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 400 ಅಭ್ಯರ್ಥಿಗಳು, ಸರ್ಕಾರಿ ಕಲಾ ಕಾಲೇಜಿನಲ್ಲಿ 500 ಅಭ್ಯರ್ಥಿಗಳು, ಎಸ್‍ಜೆಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 400 ಅಭ್ಯರ್ಥಿಗಳು, ಎಸ್‍ಆರ್‍ಎಸ್ ಹೆರಿಟೇಜ್ ಶಾಲೆಯಲ್ಲಿ 700 ಅಭ್ಯರ್ಥಿಗಳು, ಸಂತಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ 380 ಅಭ್ಯರ್ಥಿಗಳು, ವಾಸವಿ ವಿದ್ಯಾಸಂಸ್ಥೆಯಲ್ಲಿ 540 ಅಭ್ಯರ್ಥಿಗಳು ಹಾಗೂ ವಿದ್ಯಾವಿಕಾಸ ಆಂಗ್ಲ ಪ್ರೌಢಶಾಲೆಯಲ್ಲಿ 400 ಅಭ್ಯರ್ಥಿಗಳು ಸೇರಿದಂತೆ ಚಿತ್ರದುರ್ಗ ನಗರದ 8 ಪರೀಕ್ಷೆ ಕೇಂದ್ರಗಳಿಂದ ಒಟ್ಟು 3720 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಲಿದ್ದಾರೆ.
ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಪುಸ್ತಕ, ಕೈಬರಹ ಚೀಟಿ, ಪೇಜರ್, ಕ್ಯಾಲ್ಕುಲೇಟರ್, ಇಯರ್‍ಫೋನ್, ಮೊಬೈಲ್‍ಫೋನ್ ಪರೀಕ್ಷೆಗೆ ತರಲು ನಿಷೇಧಿಸಲಾಗಿದೆ.
ಅಭ್ಯರ್ಥಿಗಳು ಬೆಲೆ ಬಾಳುವ ವಸ್ತು, ಸಾಮಾಗ್ರಿ ತರದಂತೆ ತಿಳಿಸಲಾಗಿದ್ದು, ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರು. ಅಭ್ಯರ್ಥಿಗಳಿಗೆ ಕರೆಪತ್ರದ ಬಗ್ಗೆ ಮುಂಬರುವ ದಿನಗಳಲ್ಲಿ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಹಾಗೂ ಕರೆಪತ್ರದ ಲಿಂಕ್ ಸಹ ಕಳಿಸಲಾಗುವುದು.
ಅಭ್ಯರ್ಥಿಗಳು ಕರೆಪತ್ರ ಡೌನ್‍ಲೋಡ್ ಮಾಡಿಕೊಂಡು ನಿಗಧಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗಲು ಸೂಚಿಸಿದೆ ಹಾಗೂ ಕರೆಪತ್ರದಲ್ಲಿ ನಮೂದಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.