ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ಪೋಕ್ಸೋ ಪ್ರಕರಣದಲ್ಲಿ ಬಂಧಿಯಾಗಿದ್ದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಕಡೆಗೂ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದಾರೆ. ಈ ವಿಚಾರ ಮಠದ ಭಕ್ತಾಧಿಗಳಿಗೆ ಇನ್ನಿಲ್ಲದ ಸಂತಸವನ್ನು ತಂದಿದೆ. ಸ್ವಾಮೀಜಿ ಬಿಡುಗಡೆಯಾಗುತ್ತಾರೆ ಎಂಬ ವಿಚಾರ ತಿಳಿಯುತ್ತಲೇ ಅವರ ಸ್ವಾಗತಕ್ಕೂ ಹೋಗಿದ್ದರು. ಜೈಲಿನಿಂದ ಹೊರಗಡೆ ಬಂದ ಸ್ವಾಮೀಜಿಗಳಿಗೆ ಹೂವಿನ ಹಾರ ಹಾಕಿ, ಹೂಮಳೆಯನ್ನೇ ಸುರಿಸಿದರು. ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದರು.
ಬಸವಪ್ರಭು ಸ್ವಾಮೀಜಿಯವರು ಕೂಡ ಶ್ರೀಗಳನ್ನು ಸ್ವಾಗತಿಸಲು ಹೋಗಿದ್ದರು. ಸ್ವಾಮೀಜಿ ಹೊರ ಬರುತ್ತಲೇ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಭಕ್ತರೆಲ್ಲರೂ ಸಂಭ್ರಮ ಪಟ್ಟಿದ್ದಾರೆ. ಇದೇ ವೇಳೆ ಮುರುಘಾ ಶರಣರು ಸಹ ಮಾತನಾಡಿದ್ದು, ಸತ್ಯಕ್ಕೆ ಜಯ ಸಿಗುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಾರಾಗೃಹದಿಂದ ಹೊರಬಂದ ಮುರುಘಾ ಶ್ರೀಗಳು ಮಾಧ್ಯಮದವರೊಂದಿಗೆ ಮಾತನಾಡಿ, ಮುರುಘೇಶನ ದಯೆಯಿಂದ ನಾವೀಗ ಹೊರಗೆ ಬಂದಿದ್ದೇನೆ. ನಾವೀಗ ದಾವಣಗೆರೆಯ ಶಿವಯೋಗಿ ಆಶ್ರಮಕ್ಕೆ ಹೊರಟಿದ್ದೇವೆ. ಮುಂದೆ ವಿಚಾರ ಮಾಡಿ ಹೆಜ್ಜೆ ಇಡೋಣಾ. ಜೈಲಲ್ಲಿದ್ದ ವಿಚಾರ ಹೇಳುವುದಕ್ಕೆ ಇದು ಸಕಾಲವಲ್ಲ. ಮೌನ ವಹಿಸುವ ಕಾಲವಿದು. ಈ ಕೇಸಿನ ಸಂಬಂಧ ಕಾನೂನು ಹೋರಾಟ ನಡೆಯುತ್ತಿದೆ. ಸತ್ಯಕ್ಕೆ ಜಯ ಸಿಗಲಿದೆ. ಭಕ್ತರಿಗೆ ಈಗಾಗಲೇ ಹೇಳಬೇಕಾದ್ದನ್ನು ಹೇಳಲಾಗಿದೆ ಎಂದು ಭಕ್ತರಿಗೆ ಮತ್ತೊಮ್ಮೆ ಸಂದೇಶ ಸಾರಿ ದಾವಣಗೆರೆಗೆ ಹೊರಟರು.
ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅದರ ಪರಿಣಾಮ 2022ರಲ್ಲಿ ಅರೆಸ್ಟ್ ಆಗಿದ್ದ ಸ್ವಾಮೀಜಿ, 14 ತಿಂಗಳ ಶಿಕ್ಷೆ ಅನುಭವಿಸಿ, ಮತ್ತೆ ಬಂಧನವಾಗಿದ್ದರು. ಇದೀಗ ಷರತ್ತು ಬದ್ಧ ಜಾಮೀನು ಸಿಕ್ಕಿದ್ದು ಜೈಲಿನಿಂದ ಹೊರಗೆ ಬಂದಿದ್ದಾರೆ. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಇರುವುದಕ್ಕೆ ಅನುಮತಿ ಇಲ್ಲದ ಕಾರಣ ದಾವಣಗೆರೆಗೆ ಹೋಗಿದ್ದಾರೆ.