Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಇ-ಖಾತಾ, ಇ-ಸ್ವತ್ತು ವಿಲೇವಾರಿಗೆ ವಾರ್ಡ್‌ವಾರು ವೇಳಾಪಟ್ಟಿ; ಶೀಘ್ರದಲ್ಲೇ ನಗರಸಭೆಯಲ್ಲಿ ಪ್ರತ್ಯೇಕ ಸಹಾಯ ಕೇಂದ್ರ

---Advertisement---

ಚಿತ್ರದುರ್ಗ. ನ.14: ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಇ-ಖಾತಾ ಹಾಗೂ ಇ-ಸ್ವತ್ತು ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ವಾರ್ಡ್‍ವಾರು ವೇಳಾಪಟ್ಟಿ ನಿಗದಿಪಡಿಸಲಾಗುವುದು. ಸಾರ್ವಜನಿಕರ ನೆರವಿಗಾಗಿ ನಗರಸಭೆ ಕಚೇರಿಯಲ್ಲಿ ಪ್ರತ್ಯೇಕ ಸಹಾಯ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ತಿಳಿಸಿದರು.

ನಗರದ ಕೋಟೆ ರಸ್ತೆಯ ಏಕನಾಥೇಶ್ವರಿ ಪಾದಗುಡಿ ಆವರಣದಲ್ಲಿ ಚಿತ್ರದುರ್ಗ ನಗರಸಭೆ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ವಾರ್ಡ್ ನಂ. 1, 2, 3 ಹಾಗೂ 4ನೇ ವಾರ್ಡ್‍ಗಳ ಸಾರ್ವಜನಿಕರ ಕುಂದುಕೊರತೆ ಆಲಿಸುವ ‘ವಾರ್ಡ್ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗ ನಗರಸಭೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲ ವಾರ್ಡ್‍ಗಳ ಅರ್ಜಿಗಳನ್ನು ಒಟ್ಟಿಗೆ ಸ್ವೀಕರಿಸಿದರೆ ವಿಲೇವಾರಿ ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಇಂತಿಷ್ಟು ವಾರ್ಡ್‍ಗಳಿಗೆ ನಿಗದಿತ ದಿನಾಂಕ ಗೊತ್ತುಪಡಿಸಿ ವೇಳಾಪಟ್ಟಿ ಪ್ರಕಟಿಸಲಾಗುವುದು. ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ಪಟ್ಟಿಯನ್ನೂ ಪ್ರದರ್ಶಿಸಲಾಗುವುದು. ಸಾರ್ವಜನಿಕರು ಸಹಾಯ ಕೇಂದ್ರದ ಮೂಲಕ ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

 

ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ:  ನಗರದ ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿ, ಕಸ ಎಸೆಯುವ ಬದಲು ನಿಗದಿತ ಸ್ಥಳಗಳಲ್ಲೇ ಹಾಕುವ ಮೂಲಕ ನಾಗರಿಕ ಪ್ರಜ್ಞೆ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ಮನವಿ ಮಾಡಿದರು.

ನಗರದ ಹಲವೆಡೆ ಕಸ ಸಂಗ್ರಹಣೆಗಾಗಿ ನಗರಸಭೆಯಿಂದ ವಿಶೇಷವಾಗಿ ಮೆಟಲ್ ಬಾಟಲ್ ಮಾದರಿಯ ತೊಟ್ಟಿಗಳನ್ನು ಅಳವಡಿಸಲಾಗಿದೆ. ಆದರೆ, ಜನರು ನೀರಿನ ಬಾಟಲಿ, ಚಾಕೊಲೇಟ್, ಚಿಪ್ಸ್ ಕವರ್‍ಗಳನ್ನು ರಸ್ತೆ ಬದಿಗೆ ಎಸೆಯುತ್ತಿರುವುದರಿಂದ ಅವು ಚರಂಡಿ ಸೇರಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದೆ. ಇದರಿಂದ ಚರಂಡಿ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೂ ತೊಂದರೆಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು’ ಎಂದರು.

ನಗರದಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಸೋರಿಕೆ ಹಾಗೂ ಸಮಸ್ಯೆಗಳ ಕುರಿತು ಆಯುಕ್ತರು ಈಗಾಗಲೇ ಖುದ್ದು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ದುರಸ್ತಿ ಕಾರ್ಯ ಕೈಗೊಳ್ಳಲಿದ್ದಾರೆ. ನಗರಸಭೆಯು ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ನಗರದ ಭೌಗೋಳಿಕ ಏರಿಳಿತಗಳಿಂದಾಗಿ ಒಳಚರಂಡಿ ಬ್ಲಾಕೇಜ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಸದ್ಯ ಮಳೆ ಇಲ್ಲದಿರುವುದರಿಂದ ಸಮಸ್ಯೆ ಅಷ್ಟಾಗಿ ತೀವ್ರವಾಗಿಲ್ಲ. ಮಳೆಗಾಲಕ್ಕೂ ಮುನ್ನವೇ ಯುಜಿಡಿ ನಿರ್ವಹಣಾ ಕಾಮಗಾರಿಗಳನ್ನು ಚುರುಕುಗೊಳಿಸಿ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ವಾರದಿಂದ ಜಾರಿಯಾಗಲಿರುವ ‘ಇ-ಸ್ವತ್ತು’ ಅಭಿಯಾನವನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ವಾರ್ಡ್‍ಗಳಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆ ಕುರಿತ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕಾಯಂ ಪೌರಕಾರ್ಮಿಕರು ನಿವೃತ್ತರಾಗಿದ್ದರೆ ಅಥವಾ ಕೆಲಸ ಬಿಟ್ಟಿದ್ದರೆ, ಆ ಸ್ಥಾನಗಳಿಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಂಡು ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೌರಾಯುಕ್ತೆ ಲಕ್ಷ್ಮೀ ಮಾತನಾಡಿ, ಸಾರ್ವಜನಿಕರು ಇ-ಸ್ವತ್ತು ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ಮಧ್ಯವರ್ತಿಗಳನ್ನು ಆಶ್ರಯಿಸುವ ಅಗತ್ಯವಿಲ್ಲ. ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿದರೆ, ಐದೇ ದಿನಗಳಲ್ಲಿ ಮನೆ ಬಾಗಿಲಿಗೆ ಇ-ಸ್ವತ್ತು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ನಿತ್ಯ ನಗರಸಭೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ವಾರ್ಡ್ ಮಟ್ಟದಲ್ಲೇ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಇಲ್ಲಿ ದಾಖಲಾಗುವ ಕುಡಿಯುವ ನೀರು, ಬೀದಿ ದೀಪ, ಚರಂಡಿ ಸ್ವಚ್ಛತೆ ಸೇರಿದಂತೆ ಎಲ್ಲಾ ದೂರುಗಳನ್ನು ಮುಂದಿನ ಶುಕ್ರವಾರದೊಳಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
‘ಸರ್ಕಾರದ ಮಹತ್ವಾಕಾಂಕ್ಷಿ ಇ-ಖಾತಾ ಆಂದೋಲನದಡಿ ಸಾರ್ವಜನಿಕರಿಗೆ ಸುಲಭವಾಗಿ ಇ-ಸ್ವತ್ತು ಸಿಗುವಂತಾಗಲು ನಗರಸಭೆ ಕಚೇರಿಯಲ್ಲಿ ಪ್ರತ್ಯೇಕ ಹೆಲ್ಪ್ ಡೆಸ್ಕ್ ತೆರೆಯಲಾಗುವುದು. ಮುಂದಿನ ಗುರುವಾರದಿಂದ ವಾರ್ಡ್‍ವಾರು ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರದು.

ಸಾರ್ವಜನಿಕರು ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿಸಿದರೆ, ನಗರಸಭೆಯಿಂದ ಉತ್ತಮ ಆಡಳಿತ ಹಾಗೂ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಶಾಸಕರ ಮಾರ್ಗದರ್ಶನದಲ್ಲಿ ಚಿತ್ರದುರ್ಗವನ್ನು ಸ್ವಚ್ಛ ನಗರವನ್ನಾಗಿಸಲು ಶ್ರಮಿಸಲಾಗುತ್ತಿದ್ದು, ಜನಸ್ನೇಹಿ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಟಿ. ಕೃಷ್ಣಮೂರ್ತಿ ಮಾತನಾಡಿ, ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ತ್ವರಿತವಾಗಿ ಆಗುತ್ತಿಲ್ಲ. ಕಚೇರಿಯ ಟೇಬಲ್‍ಗಳಲ್ಲಿ ಕಡತಗಳು ತಿಂಗಳುಗಟ್ಟಲೆ ಧೂಳು ಹಿಡಿಯುತ್ತಿವೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಿ ಆಡಳಿತ ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ದಾಖಲೆಗಳ ಕೊರತೆಯಿದ್ದರೆ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವ ಸೌಜನ್ಯ ಸಿಬ್ಬಂದಿ ತೋರಬೇಕು. ಅದು ಬಿಟ್ಟು ತಿಂಗಳುಗಟ್ಟಲೆ ಕಡತಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಕ್ಕೆ ಸೂಳೆಕೆರೆಯಿಂದ ಬರುವ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾರಿಕಣಿವೆ ಜಲಾಶಯದಿಂದ 2ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಈ ಕುರಿತು ಈಗಾಗಲೇ ಶಾಸಕರು ಮತ್ತು ಪೌರಾಯುಕ್ತರು ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದ್ದು, ಜಿಲ್ಲಾಧಿಕಾರಿಗಳು ಈ ಯೋಜನೆಗೆ ವಿಶೇಷ ಆದ್ಯತೆ ನೀಡಿ ಕಾಮಗಾರಿ ತ್ವರಿತಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಗರ ಬೆಳೆದಂತೆ ಸ್ವಚ್ಛತಾ ಕಾರ್ಯವೂ ಹೆಚ್ಚಾಗಿದೆ. ಆದರೆ, ಇರುವ ಸಿಬ್ಬಂದಿ ಸಂಖ್ಯೆ ಕಡಿಮೆಯಾಗುತ್ತಿದೆ. ನಿವೃತ್ತರಾದ ಹಾಗೂ ಮೃತಪಟ್ಟ ಪೌರಕಾರ್ಮಿಕರ ಸ್ಥಾನಕ್ಕೆ ಹೊಸಬರನ್ನು ನೇಮಿಸಿಕೊಳ್ಳುತ್ತಿಲ್ಲ. ಕಳೆದ ಎರಡು-ಮೂರು ವರ್ಷಗಳಿಂದ 84 ಪೌರಕಾರ್ಮಿಕರ ನೇಮಕಾತಿ ಕಡತ ದಾವಣಗೆರೆ ಮತ್ತು ಚಿತ್ರದುರ್ಗ ಕಚೇರಿಗಳ ನಡುವೆ ಅಲೆದಾಡುತ್ತಿದೆ. ಜಿಲ್ಲಾಧಿಕಾರಿಗಳು ತಕ್ಷಣವೇ ಈ ಕಡತಕ್ಕೆ ಅನುಮೋದನೆ ನೀಡಿ, ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳುವ ಮೂಲಕ ನಗರದ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ನಗರದಲ್ಲಿ ಬೀದಿ ನಾಯಿ ಮತ್ತು ಹಂದಿಗಳ ಹಾವಳಿ ನಿಯಂತ್ರಣಕ್ಕೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದರು. ಸಭೆಯಲ್ಲಿ ನಗರಸಭೆ ಪರಿಸರ ಅಭಿಯಂತರ ಜಾಫರ್, ನಗರಸಭೆ ಅಧಿಕಾರಿಗಳು, ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ನಾಲ್ಕೂ ವಾರ್ಡ್‍ಗಳ ನಿವಾಸಿಗಳು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now