ಚಿತ್ರದುರ್ಗ : ಕಳೆದ ಹದಿನೈದು ದಿನಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಸರ್ಕಾರ ಅವರನ್ನ ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಸುತ್ತಿದೆ. ಇದೀಗ ಆ ಯುದ್ಧ ಭೂಮಿಯಲ್ಲಿ ಸಿಲುಕಿದ್ದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿಯ ವಿಷ್ಣು ಮುರುಗನ್ ಅವರು ಸೋಮವಾರ ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಬಂದಿದ್ದಾರೆ.
ತವರಿಗೆ ಬಂದ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮನ್ನು ಮನೆ ಮಗನಂತೆ ನೋಡಿಕೊಂಡಿದೆ. ನಾವು ಮಿಷನ್ ಗಂಗಾ ಎಂಬ ಪದ ಕಿವಿಯಲ್ಲಿ ಕೇಳಿರಲಿಲ್ಲ. ಹಂಗೇರಿಗೆ ಲಕ್ಸುರಿ ಫ್ಲೈಟ್ ವ್ಯವಸ್ಥೆ ಕಲ್ಪಿಸಿ, ಅಲ್ಲಿಂದ ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತಂದರು. ನಂತರ ದೆಹಲಿ ಕರ್ನಾಟಕ ಭವನದಲ್ಲಿ ವಿಶ್ರಾಂತಿ ಕೊಠಡಿಯಲ್ಲಿರಿಸಿದ್ದರು.
ಅಷ್ಟೇ ಅಲ್ಲ ರುಚಿಕರವಾದ ಊಟ ಕೊಟ್ಟು ಸತ್ಕರಿಸಿದರು. ಕೇಂದ್ರ ಸರ್ಕಾರದ ಪಿಎಂ, ರಾಜ್ಯ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ, ಮಾಧ್ಯಮಗಳು, ಸ್ಥಳೀಯ ಪಂಚಾಯತ್ ಅಧಿಕಾರಿಗಳು, ಶಾಸಕಿ, ಸಂಸದರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ವಿಷ್ಣು ಮುರುಗನ್ ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಯೊಬ್ಬ ನೀಡಿದ್ದ ಗಟ್ಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರ ಯೋಚನೆ ಬೇರೆ ಆಗಿರಬಹುದು. ಆದರೆ ನಮ್ಮ ಸರ್ಕಾರ ಬೇರೆ ದೇಶಕ್ಕೋಸ್ಕರ ನಮ್ಮ ಜೀವವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದರು.
ದೇಶವನ್ನು ಉಳಿಸಿಕೊಳ್ಳಲು ಉಕ್ರೇನ್ ಯೋಧರು ಒಂದು ಕಡೆ ಹೋರಾಟ ನಡೆಸಿದರೆ ಮತ್ತೊಂದು ಕಡೆ ಉಕ್ರೇನ್ ಪ್ರಜೆಗಳು ಕಷ್ಟದಲ್ಲಿದ್ದವರಿಗೆ ಊಟ, ನೀರು, ಕೊಟ್ಟು ಸತ್ಕರಿಸಿ ಮಾನವಿಯತೆ ಮೆರೆದಿದ್ದಾರೆ. ನಾವು ಸುಮಾರು 12 ಕಿಲೋಮೀಟರ್ ದೂರ ನಡೆಯುವ ಪರಿಸ್ಥಿತಿ ಒದಗಿ ಬಂತು. ನಮ್ಮಲ್ಲಿರುವ ಊಟ, ನೀರು ಖಾಲಿಯಾಯಿತು. ಅಂತಹ ಸಂದರ್ಭದಲ್ಲಿ ಉಕ್ರೇನ್ ಪ್ರಜೆಗಳಿಗೆ ಒಳ್ಳೆಯ ಮನಸ್ಸಿತ್ತು.
ಒಂದೊಂದು ಕಿಲೋಮೀಟರ್ ದೂರದ ಉದ್ದಕ್ಕೂ ಟೀ, ಕಾಫಿ, ಬಿಸಿನೀರು, ಡ್ರೈ ಫ್ರೂಟ್ಸ್ ಊಟ ಎಲ್ಲವೂ ಅವರೇ ಕೊಟ್ರು ಅವರು ಕೊಟ್ಟಿದ್ದು ನಮಗೆ ಉಪಯೋಗವಾಯಿತು ಎಂದು ವಿಷ್ಣು ಮುರುಗನ್ ತಿಳಿಸಿದರು.
” ವೈದ್ಯಕೀಯ ಶಿಕ್ಷಣ ಪಡೆಯಲು ನವಂಬರ್ ತಿಂಗಳಲ್ಲಿ ಉಕ್ರೇನ್ ಗೆ ತೆರಳಿದೆ. ಲಿವಿವ್ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ನಾನು ಮೊದಲ ವರ್ಷದ ಶಿಕ್ಷಣ ಪಡೆಯುತಿದ್ದೆ. ಅಲ್ಲಿ ಏನು ನಮಗೆ ತೊಂದ್ರೆ ಆಗಲಿಲ್ಲ. ಯುದ್ದದ ಎಫೆಕ್ಟ್ ಕೂಡ ನಮಗೆ ತಗುಲಲಿಲ್ಲ.
ಫೆಬ್ರವರಿ 24 ರಂದು ಯುದ್ಧ ಘೋಷಿಸಿದರು. 25 ರಂದು ನಾರ್ಮಲ್ ಇತ್ತು. ನಂತರ ಸ್ವಲ್ಪ ಅಲ್ಲಿನ ಪರಿಸ್ಥಿತಿ ಕುಂಠಿತವಾಗುತ್ತಾ ಬಂದಿತು. ಊಟ ಹಾಗೂ ಡ್ರೈ ಫ್ರೂಟ್ಸ್ ಎಲ್ಲ ಖಾಲಿ ಆಗುತ್ತಾ ಬಂತು. ಎಟಿಎಂ ಮುಂಭಾಗದಲ್ಲಿ ಜನ ಸಾಲಾಗಿ ನಿಲ್ಲಲು ಪ್ರಾರಂಭಿಸಿದರು. ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಕಠಿಣವಾಗಲು ಪ್ರಾರಂಭವಾಯಿತು. ನಾವು ಮೊದಲು ಪೋಲೆಂಡ್ ಬಾರ್ಡರ್ ಗೆ ಬಂದೆವು. ಆದರೆ ಉಕ್ರೇನ್ ಯೋಧರು ನಮ್ಮನ್ನು ತಡೆದು ವಾಪಸ್ ಕಳುಹಿಸಿದರು. ಮತ್ತೆ ನಾವು ಹಂಗೇರಿ ಬಾರ್ಡರ್ ಮೂಲಕ ದೆಹಲಿಗೆ ಬಂದೆವು ಎಂದಿದ್ದಾರೆ.