ಚಿತ್ರದುರ್ಗ, (ನವೆಂಬರ್.26) : ಕರ್ನಾಟಕ ವಿಧಾನ ಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಉಮೇದುವಾರಿಕೆ ಹಿಂಪಡೆಯುವಿಕೆ ಕೊನೆಯ ದಿನದ ನಂತರ ಮೂವರು ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನ.26 ರಂದು ಮಧ್ಯಾಹ್ನ 3ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಯಾವುದೇ ನಾಮಪತ್ರಗಳನ್ನು ಹಿಂಪಡೆಯಲಾಗಿಲ್ಲ. ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ 4 ಉಮೇದುವಾರರಿಂದ ಒಟ್ಟು 7 ನಾಮಪತ್ರಗಳು ಸ್ವೀಕೃತವಾಗಿದ್ದು, 01 ಉಮೇದುವಾರರ ನಾಮಪತ್ರ ತಿರಸ್ಕøತಗೊಂಡಿದ್ದು, ಎಲ್ಲಾ 3 ನಾಮಪತ್ರಗಳು ಕ್ರಮಬದ್ಧವಾಗಿ ಅಂಗೀಕಾರವಾಗಿರುತ್ತದೆ. ಅಂತಿಮ ಕಣದಲ್ಲಿ ಭಾರತೀಯ ಜನತಾ ಪಕ್ಷದ ನವೀನ್ ಕೆ.ಎಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೋಮಶೇಖರ್ ಬಿ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಅವರು ಅಂತಿಮ ಕಣದಲ್ಲಿದ್ದಾರೆ ಎಂದು ತಿಳಿಸಿದರು.