ಚಿತ್ರದುರ್ಗ, (ನ.26) : ಭಾರತೀಯ ಚುನಾವಣಾ ಆಯೋಗವು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ಅವರನ್ನು ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮತದಾರರು ಮತ್ತು ಮತಗಟ್ಟೆಗಳ ಸಂಖ್ಯೆ: ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕು ಸೇರಿವೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕು ಸೇರಿದಂತೆ ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕು ಸೇರಿದಂತೆ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವ್ಯಾಪ್ತಿಗೆ ಒಟ್ಟು 9 ತಾಲ್ಲೂಕುಗಳು ಸೇರಿವೆ.
ಹರಿಹರ ತಾಲ್ಲೂಕಿನಲ್ಲಿ 24 ಮತಗಟ್ಟೆ, ದಾವಣಗೆರೆ 42, ಜಗಳೂರು 23 ಮತಗಟ್ಟೆ ಸೇರಿದಂತೆ ಒಟ್ಟು 89 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 17 ಮತಗಟ್ಟೆ, ಚಳ್ಳಕೆರೆ 41, ಚಿತ್ರದುರ್ಗ 39, ಹೊಳಲ್ಕೆರೆ 30, ಹಿರಿಯೂರು 34 ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 34 ಮತಗಟ್ಟೆ ಸೇರಿದಂತೆ 195 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2384 ಪುರುಷ ಮತದಾರರು, 2689 ಮಹಿಳಾ ಮತದಾರರು ಸೇರಿದಂತೆ ಒಟ್ಟು 5073 ಮತದಾರರು ಇದ್ದಾರೆ.
452 ಮತದಾನ ಸಿಬ್ಬಂದಿ: ಪ್ರತಿಯೊಂದು ಮತಗಟ್ಟೆಗೆ ಒಬ್ಬರು ಪಿಆರ್‍ಓ ಹಾಗೂ ಒಬ್ಬರು ಎಪಿಆರ್‍ಓ ಅವರನ್ನು ನೇಮಕ ಮಾಡಲಾಗಿದ್ದು, 226 ಪಿಆರ್‍ಓ ಹಾಗೂ 226 ಎಪಿಆರ್‍ಓ ಸೇರಿದಂತೆ ಒಟ್ಟು 452 ಮತದಾನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ನವೆಂಬರ್ 30 ಮತ್ತು ಡಿಸೆಂಬರ್ 06 ರಂದು ತರಬೇತಿಯನ್ನು ಆಯಾ ತಾಲ್ಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದರು.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳು: ಆಯಾ ತಾಲ್ಲೂಕುಗಳಲ್ಲಿ ತಾಲ್ಲೂಕು ಕಚೇರಿಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ನಡೆಯಲಿದೆ. ಚಿತ್ರದುರ್ಗ ತಾಲ್ಲೂಕು ಮಾತ್ರ ಸರ್ಕಾರಿ ವಿಜ್ಞಾನ ಕಾಲೇಜು (ಹೊಸ ಕಟ್ಟಡ)ದಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಹಾಗೂ ನಡೆಯಲಿದೆ.
ಭದ್ರತಾ ವ್ಯವಸ್ಥೆ: 38 ಸೂಕ್ಷ್ಮ ಮತಟ್ಟೆಗಳು, 61 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 96 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯಲು 99 ವೀಡಿಯೋ ಗ್ರಾಫರ್, 195 ವೀಕ್ಷಕರನ್ನು ಹಾಗೂ 499 ಪೊಲೀಸ್ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನೇಮಿಸಲಾಗಿದೆ. ಮತಗಟ್ಟೆಗಳಿಗೆ 32 ಸೆಕ್ಟರ್ ಅಧಿಕಾರಿಗಳು, 37 ಬಸ್, 51ಜೀಪ್ ಹಾಗೂ 8 ಮಿನಿ ಬಸ್ ವಾಹನದ ವ್ಯವಸ್ಥೆ ಮಾಡಲಾಗಿದೆ. 24*7 ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, 08194-222176 ದೂರು ನೀಡಬಹುದು. ದೂರು ಬಂದ ಕೂಡಲೇ ಎಂಸಿಸಿ ತಂಡಗಳಿಗೆ ಕ್ರಮಕೈಗೊಳ್ಳಲು ತಿಳಿಸಲಾಗುವುದು ಎಂದರು.
ಮಾದರಿ ನೀತಿ ಸಂಹಿತೆಗಾಗಿ ತಂಡಗಳ ರಚನೆಯಾಗಿದ್ದು, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಸಿಇಒ ಕಾರ್ಯನಿರ್ವಹಿಸಲಿದ್ದಾರೆ.
ಕ್ಯಾಷ್ ಸೀಜರ್‍ಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಮಾದರಿ ನೀತಿ ಸಂಹಿತೆಯಡಿ 3.020 ಎಂಎಲ್ 1.500 ಬಿಯರ್ ಲಿಕ್ಕರ್ ಸೀಜ್ ಆಗಿದ್ದು, ಇದರ ಮೊತ್ತ ರೂ.1701/- ಆಗಿರುತ್ತದೆ. ಅಬಕಾರಿ ಇಲಾಖೆಯಿಂದ 10 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಮುಕ್ತಾಯವಾಗಲಿದೆ. ಅದರಂತೆ ಡಿಸೆಂಬರ್ 08 ರ ಸಂಜೆ 4 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಆಯಾ ಕ್ಷೇತ್ರದ ಮತದಾರರನ್ನು ಹೊರತುಪಡಿಸಿ ಉಳಿದವರು ಕ್ಷೇತ್ರವನ್ನು ಬಿಟ್ಟುಹೋಗತಕ್ಕದ್ದು. ಮತದಾನದ ಸಮಯದಲ್ಲಿ ಮತದಾರರು ಎಪಿಕ್ ಕಾರ್ಡ್ ಅಥವಾ ಭಾವಚಿತ್ರವಿರುವ ಇತರೆ ಗುರುತಿನ ಚೀಟಿ ಅಥವಾ ಸ್ಥಳೀಯ ಸಂಸ್ಥೆಯವರು ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ ಹಾಜರುಪಡಿಸುವುದು. ಮತದಾನ ಕೇಂದ್ರಗಳ ಒಳಗೆ ಮೊಬೈಲ್ ಪೋನ್ ತೆಗೆದುಕೊಂಡು ಹೋಗುವಂತಿಲ್ಲ ಎಂದರು.
ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು (ಹೊಸಕಟ್ಟಡ)ನಲ್ಲಿ ಮತ ಎಣಿಕೆಯನ್ನು ಡಿಸೆಂಬರ್ 14ರಂದು ಬೆಳಿಗ್ಗೆ 8 ಗಂಟೆಗೆ ನಡೆಸಲಾಗುವುದು. ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಒಂದು ಟೇಬಲ್‍ಗೆ ಒಬ್ಬ ಮೇಲ್ವಿಚಾರಕ ಮತ್ತು ಇಬ್ಬರು ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ್ ಶಿನ್ನಾಳ್‍ಕರ್ ಇದ್ದರು.