ಬೆಂಗಳೂರು: ಪದವಿ ಓದುತ್ತಿದ್ದ ಚಿತ್ರದುರ್ಗದ ವರ್ಷಿತಾಳನ್ನ ಪ್ರಿಯಕರನೇ ಕೊಂದು ಹಾಕಿದ್ದಾನೆ. ಆರೋಪಿ ಚೇತನ್ ನನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಸದನದಲ್ಲೂ ವರ್ಷಿತಾ ವಿಚಾರ ಸದ್ದು ಮಾಡಿದೆ. ಈ ಬಗ್ಗೆ ಬಿಜೆಪಿ ಸದಸ್ಯ ನವೀನ್ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಉತ್ತರಿಸಿದ್ದಾರೆ.
ಚಿತ್ರದುರ್ಗದ ದಲಿತ ಮಾದಿಗ ಸಮುದಾಯದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಆಗಿದೆ. ಆಕೆಯನ್ನು ಆಗಸ್ಟ್ 21 ರಂದು ಚಿತ್ರದುರ್ಗ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಸಮೀಪದ ಗೋನೂರು ಸಮೀಪ ಬರ್ಬರವಾಗಿ ಹತ್ಯೆ ಮಾಡಿ ಸುಟ್ಟು ಹಾಕಿದ ಘಟನೆ ನಡೆದಿತ್ತು. ಅತ್ಯಂತ ಬಡತನದ ಕುಟುಂಬದಿಂದ ಬಂದಿದ್ದ ವರ್ಷಿತಾ ಭವಿಷ್ಯದ ಕನಸ್ಸನ್ನು ಕಾಣುತ್ತಿದ್ದಳು. ಸರ್ಕಾರಿ ಹಾಸ್ಟೆಲ್ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ. ರಾಜ್ಯದಲ್ಲಿ ಈ ರೀತಿ ಘಟನೆಗಳು ನಡೆದ ಸಂದರ್ಭದಲ್ಲಿ ಸರ್ಕಾರ ನ್ಯಾಯ ಕೊಡಿಸಬೇಕು. ಈ ಹತ್ಯೆಗೆ ಕಾರಣವಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹ ಮಾಡಿದರು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಅಂತ ನವೀನ್ ಒತ್ತಾಯ ಮಾಡಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಸರ್ಕಾರ ಈ ರೀತಿಯಾದಂತ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಂಥವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕಠಿಣ ಕ್ರಮವನ್ನು, ಯಾವುದೇ ಮುಲಾಜಿಲ್ಲದೇ ತೆಗೆದುಕೊಳ್ಳುತ್ತೇವೆ. ಯಾರೇ ಇದ್ದರು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಘಟನೆಗೆ ಸಂಬಂಧಿಸಿ ನಿರ್ದಿಷ್ಟ ಉತ್ತರ ನಾಳೆ ನೀಡುತ್ತೇವೆ ಎಂದು ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ. ಹಾಸ್ಟೇಲ್ ನಿಂದ ರಜೆ ತೆಗೆದುಕೊಂಡು ಊರಿಗೆ ಹೊರಟಿದ್ದ ವರ್ಷಿತಾ ಮನೆ ತಲುಪುವುದಕ್ಕೂ ಮುನ್ನವೇ ಕೊಲೆಯಾಗಿದೆ.






