ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಯುಗಾದಿ ಹಬ್ಬವನ್ನು ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಸಂಜೆ 6 : 40 ರ ಸುಮಾರಿಗೆ ಆಗಸದಲ್ಲಿ ಚಂದ್ರನನ್ನು ಕಣ್ತುಂಬಿಕೊಂಡ ನಂತರ ಜನರು ಹಿರಿಯರ ಆಶೀರ್ವಾದ ಪಡೆದು ಪುನೀತರಾದರು.

ಯುಗಾದಿ ಸಂಭ್ರಮವನ್ನು ಭಕ್ತರು ಭಾನುವಾರ ಮನೆಗೆ ತಳಿರು ತೋರಣ ಕಟ್ಟಿ, ಎಣ್ಣೆ ನೀರಿನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಮನೆಯಲ್ಲಿ ಪೂಜೆ ಪೂರ್ಣಗೊಳಿಸಿ ಬೇವು-ಬೆಲ್ಲ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಮರುದಿನ ಸೋಮವಾರದಂದು ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ, ಮನೆಯ ಮಹಡಿಯ ಮೇಲೆ ನಿಂತು ಜನರು ಚಂದ್ರನನ್ನು ಹುಡುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚಂದ್ರ ಅಲ್ಲಿ ಕಾಣುತ್ತಿದ್ದಾನೆ ಎಂದು ನೋಡಿದವರು ನೋಡದೇ ಇರುವವರಿಗೆ ತೋರಿಸಿ ಸಂಭ್ರಮಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಮನೆಗೆ ಬಂದು ಹಿರಿಯರ ಕಾಲಿಗೆ ನಮಸ್ಕರಿಸಿ ಭಕ್ತಿ ಮೆರೆದರು.

ಚಂದ್ರ ದರ್ಶನದ ನಂತರ ಸೋಮವಾರ ನಗರದ ಜೆ.ಸಿ.ಆರ್. ಬಡಾವಣೆಯ ಗಣಪತಿ ದೇವಸ್ಥಾನ, ತುರುವನೂರು ರಸ್ತೆಯ ಶ್ರೀ ವೆಂಕಟರಮಣ ದೇವಾಲಯ, ತಿಪ್ಪಜಿ ಸರ್ಕಲ್ ನ ಶ್ರೀ ವೆಂಕಟೇಶ್ವರ ದೇವಾಲಯ, ಕೆಳಗೋಟೆಯ ಗಣಪತಿ ದೇವಸ್ಥಾನ, ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ, ನಗರದ ಮಧ್ಯ ಭಾಗದಲ್ಲಿರುವ ನೀಲಕಂಠೇಶ್ವರ, ಬರಗೇರಮ್ಮ, ಕಣಿವೆ ಮಾರಮ್ಮ, ಏಕನಾಥೇಶ್ವರಿ, ಉತ್ಸವಾಂಬ, ಕೋಟೆ ಆಂಜನೇಯಸ್ವಾಮಿ ದೇವಾಲಯ, ಬೆಂಗಳೂರು ರಸ್ತೆಯ ಕಣಿವೆ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಪ್ರತಿ ದೇವಸ್ಥಾನದಲ್ಲೂ ವಿಶೇಷ ಪೂಜೆಗಳು ನಡೆದವು. ದೇಗುಲ ಹಾಗೂ ದೇವರಿಗೆ ಮಾಡಿದ್ದ ವಿಶೇಷ ಅಲಂಕಾರಗಳು ಗಮನ ಸೆಳೆಯುತ್ತಿದ್ದವು. ದೇವಸ್ಥಾನಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಂತರ ಪರಸ್ಪರ ಶುಭ ಕೋರಿದರು.

