ಸುದ್ದಿಒನ್, ಚಿತ್ರದುರ್ಗ, ಮಾ.23 : ನಗರದ ಜೆ.ಸಿ.ಆರ್. ಬಡಾವಣೆ ಹತ್ತಿರ ರಾಷ್ಟ್ರೀಯ ಹೆದ್ದಾರಿ 13ರ ಸೇತುವೆ ಬಳಿ ಶನಿವಾರ ಮಧ್ಯರಾತ್ರಿ ಬೈಕ್ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಪ್ರಥಮವರ್ಷದ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳಾದ ಯಾಸೀನ್ ಮತ್ತು ಅಲ್ತಾಫ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿ ನೇಬಿಲ್ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೂವರು ವಿದ್ಯಾರ್ಥಿಗಳು ಕೇರಳದ ಕೊಲ್ಲಂ ಜಿಲ್ಲೆಯ ಅಂಜಲ್ ಗ್ರಾಮದವರಾಗಿದ್ದು, ಇಲ್ಲಿನ ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮವರ್ಷದ ಬಿ.ಎಸ್ಸಿ. ನರ್ಸಿಂಗ್ ಓದುತ್ತಿದ್ದರು. ಕಾಲೇಜಿನ ಆವರಣದಲ್ಲಿಂದು ಮೃತದೇಹಗಳನ್ನು ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ದರ್ಶನಕ್ಕಾಗಿ ಇಡಲಾಗಿತ್ತು. ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮೃತ ವಿದ್ಯಾರ್ಥಿಗಳಿಗೆ ಪುಷ್ಪನಮನ ಸಲ್ಲಿಸಿ, ದುಃಖತಪ್ತ ಪೋಷಕರಿಗೆ ಧೈರ್ಯ ಹೇಳಿದರು.

ಘಟನೆ ಕುರಿತು ತೀವ್ರ ನೋವನ್ನು ವ್ಯಕ್ತಪಡಿಸಿರುವ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ.ಕಳಸದ, ಸದಸ್ಯರಾದ ಡಾ. ಪಿ.ಎಸ್. ಶಂಕರ್ ಮತ್ತು ಎಸ್.ಎನ್ ಚಂದ್ರಶೇಖರ್ ಅವರುಗಳು ಮೃತ ಕುಟುಂಬಗಳಿಗೆ ಮಕ್ಕಳ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಪ್ರಮಥರು ನೀಡಲಿ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ರೆಡ್ಡಿ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


