ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 31 : 2023 ನೇ ವರ್ಷದ ಕೊನೆಯ ದಿನದಂದು ಎರಡು ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ – ಚಳ್ಳಕೆರೆ ಹೆದ್ದಾರಿಯ ಹೊಸ ಕಲ್ಲಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮತ್ತು ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಓರ್ವ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.
ಚಿತ್ರದುರ್ಗ ತಾಲ್ಲೂಕಿನ ಹೊಸ ಕಲ್ಲಹಳ್ಳಿ ಬಳಿ ಬೈಕ್ ಮತ್ತು ಆಟೋ ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ಸಾವನ್ನಪ್ಪಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಬೈಕ್ ಹಿಂಬದಿ ಕುಳಿತಿದ್ದ ಶಿಲ್ಪ( 30) ಮತ್ತು ಆಟೋದಲ್ಲಿ ಪ್ರಯಾಣಿಸುತಿದ್ದ ಬರ್ಕತ್ ಆಲಿ ( 35) ಎಂದು ಗುರುತಿಸಲಾಗಿದೆ. ಚಿತ್ರದುರ್ಗದ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಗಿರಿಯಮ್ಮನಹಳ್ಳಿ ರಸ್ತೆ ತಿರುವಿನಲ್ಲಿ ಬುಲೇರೊ ವಾಹನ ಮತ್ತು ಟಿವಿಎಸ್ ಬೈಕ್ ನಡುವೆ ಡಿಕ್ಕಿಯಾಗಿ ತಳಕು ಲಂಬಾಣಿಹಟ್ಟಿ ಗ್ರಾಮದ ರಾಜನಾಯ್ಕ (55 )ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಚಳ್ಳಕೆರೆ ಮಾರ್ಗದಿಂದ ತಳಕು ಮಾರ್ಗವಾಗಿ ಟಿವಿಎಸ್ ಬೈಕನಲ್ಲಿ ಹೋಗುವಾಗ ಹಿಂಬದಿಯಿಂದ ಅತೀ ವೇಗವಾಗಿ ಬಂದ ಬುಲೇರೊ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಸ್ಥಳೀಯ ಗಿರಿಯಮ್ಮಹಳ್ಳಿ ಗ್ರಾಮಸ್ಥರು ಕೆಲ ಕಾಲ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಗಿರಿಯಮ್ಮನಹಳ್ಳಿ ಗ್ರಾಮದ ಕ್ಯಾಸಪ್ಪ ಮಾತನಾಡಿ. ಅವೈಜ್ಞಾನಿಕ ರಸ್ತೆಯಿಂದ ನಮ್ಮ ಗಿರಿಯಮ್ಮಹಳ್ಳಿ ಕ್ರಾಸ್ ನಲ್ಲಿ ಸಾಕಷ್ಟು ಭಾರಿ ಅಪಘಾತಗಳಾಗಿ ಕ್ರಾಸ್ ನಲ್ಲಿ ಅಂಡರ್ ಪಾಸ್ ಮಾಡಿಸುವಂತೆ ತಳಕು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದೇವೆ.
ಯಾವುದೇ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಅಧಿಕಾರಿಗಳು ಈ ಕ್ರಾಸ್ ನಲ್ಲಿ ಅಂಡರ್ ಪಾಸ್ ಮಾಡಿಸಿದರೆ ಈ ಭಾಗದ ಜನರಿಗೆ ಒಳ್ಳೆಯದು ಆಗುತ್ತದೆ ಇಂದು ನಡೆದ ಅಪಘಾತದ ವೇಳೆ ಗ್ರಾಮಸ್ಥರು ಧರಣಿ ಕೂತ ಸ್ಥಳದಲ್ಲಿ ಅಧಿಕಾರಿಗಳು ಜನವರಿ 3ನೇ ತಾರೀಖು ಗಡುವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಂಡರ್ ಪಾಸ್ ಮಾಡಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.
ಇನ್ನೂ ಗಿರಿಯಮ್ಮನಹಳ್ಳಿ ಗ್ರಾಮದ ರತ್ನಮ್ಮ ಮಾತನಾಡಿ ನಮಗೆ ಇಲ್ಲಿ ಪ್ರತಿದಿನ ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತದೆ ದಿನಬೆಳಗಾದರೆ ಕೂಲಿಕಾರ್ಮಿಕರು ಸೇರಿದಂತೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಿ ಬರಲು ತುಂಬಾ ತೊಂದರೆ ಆಗುತ್ತದೆ ಅಂಡರ್ ಪಾಸ್ ಮಾಡಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಿರಿಯಮ್ಮನಹಳ್ಳಿ ಗ್ರಾಮಸ್ಥರಾದ ಪ್ರಕಾಶ್ ದಿನೇಶ್ ತಿಪ್ಪಕ್ಕ ಪವನ್, ದಿನೇಶ್, ಲೋಕೇಶ್, ಧನಂಜಯ, ಚಂದ್ರಶೇಖರ್, ತಿಪ್ಪಯ್ಯ ಇದ್ದರು.