ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ .24 : ಗಣಿಭಾದಿತ ಪ್ರದೇಶಗಳಾದ ಕಾಗಳಗೆರೆ, ಡಿ.ಮದಕರಿಪುರ, ತಣಿಗೆಹಳ್ಳಿ, ಮುತ್ತುಗದೂರು, ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ 52 ಲಾರಿಗಳನ್ನು ಕೆಲವು ತಿಂಗಳುಗಳ ಕಾಲ ಗಣಿಗಾರಿಕೆಗೆ ಬಳಸಿಕೊಂಡು ಏಕಾಏಕಿ ಹೊರಗಿಟ್ಟಿರುವುದನ್ನು ವಿರೋಧಿಸಿ ಸಿರಿಗೆರೆಯ ಡಿ.ಮದಕರಿಪುರ ಸಮೀಪ ಕಳೆದ ಐದು ದಿನಗಳಿಂದಲೂ ಧರಣಿ ನಡೆಸುತ್ತಿರುವವರು ನ್ಯಾಯ ಒದಗಿಸುವಂತೆ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಂಜಾರ ಲಂಬಾಣಿ ಸಮಾಜ, ದಲಿತ ಸಂಘರ್ಷ ಸಮಿತಿ, ವಾಲ್ಮೀಕಿ ಸೇನೆ, ಅಂಬೇಡ್ಕರ್ ಸೇನೆ ಇವರುಗಳ ಜೊತೆಗೂಡಿ ಧರಣಿ ನಡೆಸುತ್ತಿರುವವರು ಸ್ಥಳೀಯರಿಗೆ ಕೆಲಸ ಕೊಡಬೇಕೆಂಬ ನಿಯಮವಿದ್ದರೂ ಜಾನ್ ಮೈನ್ಸ್ ಮತ್ತು ವೇದಾಂತ ಮೈನ್ಸ್ ನವರು ಇಲ್ಲಸಲ್ಲದ ಸಬೂಬು ಹೇಳಿ ಐವತ್ತೆರಡು ಕುಟುಂಬಗಳ ಲಾರಿಯನ್ನು ಕೆಲಸಕ್ಕೆ ತೆಗೆದುಕೊಳ್ಳದೆ ದರ್ಪ ತೋರುತ್ತಿದ್ದಾರೆ. ಫೈನಾನ್ಸ್ ಗಳಿಂದ ಸಾಲ ಪಡೆದು ಲಾರಿ ಖರೀದಿಸಿರುವವರು ಅದಿರು ಸಾಗಾಣಿಕೆ ಮಾಡಲು ಅವಕಾಶವಿಲ್ಲದೆ ಪ್ರತಿ ತಿಂಗಳ ಕಂತಿನ ಹಣ ಮೂವತ್ತು ಸಾವಿರ ರೂ.ಗಳನ್ನು ಕಟ್ಟಲು ಪರದಾಡುತ್ತಿದ್ದಾರೆ. ಇದರ ನಡುವೆ ಕುಟುಂಬ ನಿರ್ವಹಣೆ ಮಕ್ಕಳ ಶಿಕ್ಷಣಕ್ಕೂ ಸಂಚಕಾರವಾಗಿದೆ.
ಗಣಿ ಧೂಳಿಗೆ ಸುತ್ತಮುತ್ತಲಿನ ಬೆಳೆಗಳು ನಾಶವಾಗುತ್ತಿವೆ. ಅನೇಕ ಬಾರಿ ಜಾನ್ ಮೈನ್ಸ್ ಮತ್ತು ವೇದಾಂತ ಮೈನ್ಸ್ನವರಿಗೆ ಸ್ಥಳೀಯರಿಗೆ ಕೆಲಸ ಕೊಡಿ ಎಂದು ಬೇಡಿಕೊಳ್ಳುತ್ತಿದ್ದರೂ ಹೊರಗಿನವರಿಗೆ ಉದ್ಯೋಗ ಕೊಡುತ್ತಿರುವುದು ಯಾವ ನ್ಯಾಯ? ಹಾಗಾಗಿ ತಾವುಗಳು ಮಧ್ಯ ಪ್ರವೇಶಿಸಿ 52 ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಜಿಲ್ಲಾ ಬಂಜಾರ ಲಂಬಾಣಿ ಸಮಾಜದ ಅಧ್ಯಕ್ಷ ಎಂ.ಸತೀಶ್‌ಕುಮಾರ್, ಪ್ರಸನ್ನಕುಮಾರ್, ಸುಂದರಮೂರ್ತಿ, ರಾಜಣ್ಣ, ತಿಪ್ಪೇಶ್, ಶ್ರೀನಿವಾಸ್, ಪ್ರಭಾಕರ್, ಉಮಾಪತಿ ಈ ಸಂದರ್ಭದಲ್ಲಿ ಹಾಜರಿದ್ದರು.