ಗೂಗಲ್ ಮ್ಯಾಪ್ ನಂಬಿ ಕಾಡಿನಲ್ಲಿ ಸಿಲುಕಿದ ಚಿತ್ರದುರ್ಗದ ವಿದ್ಯಾರ್ಥಿಗಳು : ಬಚಾವ್ ಆಗಿದ್ದೇಗೆ..?

suddionenews
1 Min Read

ಸುದ್ದಿಒನ್, ಚಿತ್ರದುರ್ಗ : ಓದುವಾಗ ಲೈಫ್ ನಲ್ಲಿ ಜೋಶ್ ಜೋರಾಗಿನೇ ಇರುತ್ತೆ‌. ಪ್ರವಾಸ ಅಂತ ಬಂದ್ರೆ ಕಾಡು ಮೇಡು, ಜಲಪಾತಗಳಿರುವ, ಟ್ರಕ್ಕಿಂಗ್ ಮಾಡಬಹುದಾದಂತ ಜಾಗಗಳನ್ನೇ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವುದು. ಆ ರೀತಿ ರಿಸ್ಕಿ ಜಾಗಗಳಿಗೆ ಹೋಗುವ ಮುನ್ನ ಕೊಂಚ ಎಚ್ಚರದಿಂದ ಇರಬೇಕು. ಯಾಕಂದ್ರೆ ಚಿತ್ರದುರ್ಗದ ಸ್ನೇಹಿತರೆಲ್ಲ ಸೇರಿ, ಟ್ರಕ್ಕಿಂಗ್ ಹೋಗಿದ್ದವರು ಸುರಕ್ಷಿತವಾಗಿ ವಾಪಾಸ್ ಬಂದಿದ್ದೆ ಹೆಚ್ಚು ಎಂಬ ಘಟನೆ ನಡೆದಿದೆ.

ಚಿತ್ರದುರ್ಗದ ಐವರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಯರು ಪ್ರವಾಸಕ್ಕೆಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗ ಕಾಡಿಗೆ ಹೋಗಿದ್ದಾರೆ. ಇವರೆಲ್ಲ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಅದರಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸಹ ಇದ್ದರು. ಟೆಂಪೋ ಟ್ರಾವೆಲರ್ಸ್‌‌ ವಾಹನವನ್ನು ಬಾಡಿಗೆ ಪಡೆದು ಹೋಗಿದ್ದಾರೆ. ಮೂಡೊಗೆರೆಯಿಂದ ತಮ್ಮ ಟ್ರಾವೆಲ್ ಆರಂಭಿಸಿದ್ದಾರೆ.

ಇವರೆಲ್ಲ ರಾಣಿ ಝರಿ ಕಡೆಯಿಂದ ಪ್ರಯಾಣ ಆರಂಭಿಸಬೇಕಿತ್ತು. ಆದರೆ ಗೂಗಲ್ ಮ್ಯಾಪ್ ನಲ್ಲಿ ಬಂಡಾಜೆ ಎಂದು ಸರ್ಚ್ ಮಾಡಿದ್ದಾರೆ. ಆಗ ಲೊಕೇಶನ್ ದಕ್ಷಿಣ ಕನ್ನಡ ಜಿಲ್ಲೆಯ ಡಿಡಪೆ ಮಾರ್ಗವನ್ನ ತೋರಿಸಿದೆ. ಸರಿ ಮ್ಯಾಪ್ ತೋರಿಸಿದ ಮಾರ್ಗದಲ್ಲಿಯೇ ಸಾಗಿದ್ದಾರೆ. ಕಡೆಗೆ ಬಂಡಾಜೆ ಜಲಪಾತ ಸಿಕ್ಕಿದ್ದು, ಅಲ್ಲಿ ಒಂದಷ್ಟು ಎಂಜಾಯ್ ಮಾಡಿದ್ದಾರೆ. ಬಳಿಕ ಅಲ್ಲಿಂದ ಮತ್ತೆ ಗೂಗಲ್ ಮ್ಯಾಪ್ ಅನ್ನೇ ನಂಬಿಕೊಂಡು ಹೊರಟವರಿಗೆ ಬಲ್ಲಾಳರಾಯದುರ್ಗ ಹಾಗೂ ರಾಣಿಝರಿ ಮಾರ್ಗ ಹಿಡಿದಿದ್ದಾರೆ. ಆದರೆ ದಾರಿ ತಲುಪುವಷ್ಟರಲ್ಲಿ ಕತ್ತಲಾಗಿದೆ. ಅತ್ತ ನೆಟ್ವರ್ಕ್ ಸಿಗದೆ ಗೂಗಲ್ ಮ್ಯಾಪ್ ಕೂಡ ವರ್ಕ್ ಆಗಿಲ್ಲ. ಏನು ಮಾಡಬೇಕೆಂದು ತಿಳಿಯದೆ ಕಾಡಿನಲ್ಲಿಯೇ ಕುಳಿತು ಬಿಟ್ಟಿದ್ದಾರೆ.

ಆ ಭಯಕ್ಕೆ ಹಲವರು ಸುಸ್ತಾಗಿ ಬಿಟ್ಟಿದ್ದಾರೆ. ಹೇಗೋ ವಿಚಾರ ತಿಳಿದ ಬಾಳೂರು ಠಾಣೆಯ ಸಬ್ಇನ್ಸ್‌ಪೆಕ್ಟರ್ ದಿಲೀಪ್ ಕುಮಾರ್ ತಮ್ಮ ಜೊತೆಗೆ ಸ್ನೇಕ್ ಆರೀಫ್, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಕರೆದುಕೊಂಡು ಹೋಗಿ ಆ ಕತ್ತಲಲ್ಲಿ ವಿದ್ಯಾರ್ಥಿಗಳನ್ನ ಹುಡುಕಿದ್ದಾರೆ. ಸುರಕ್ಷಿತವಾಗಿ ಕರೆತಂದು ಚಿತ್ರದುರ್ಗದ ಕಡೆಗೆ ವಾಹನ ಹತ್ತಿಸ ಕಳುಹಿಸಿದ್ದಾರೆ. ಗೊತ್ತಿಲ್ಲದ ಪ್ರದೇಶಗಳಿಗೆ ವಿದ್ಯಾರ್ಥಿಗಳು ಪ್ರವಾಸ ಎಂದು ಹೋಗುವ ಮುನ್ನ ಬಹಳ ಎಚ್ಚರಿಕೆ ಇರಲಿ ಎಂಬುದೇ ಸುದ್ದಿ ಒನ್ ಕಳಕಳಿ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks