ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ಮೇ.08) : ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಚಿತ್ರದುರ್ಗ ಜಿಲ್ಲೆ ಶೇ.96.8ರಷ್ಟು ದಾಖಲೆಯ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.
ಈ ಫಲಿತಾಂಶದಲ್ಲಿ ಹಿರಿಯೂರಿನ ರಾಷ್ಟ್ರೀಯ ಅಕಾಡಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ದಯಾನಿಧಿ.ಎಸ್.ಪಿ ಅವರು 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದುಕೊಂಡರೆ,
ಹಿರಿಯೂರು ರಾಷ್ಟ್ರೀಯ ಅಕಾಡೆಮಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸೃಜನ ಎಸ್ ಗೌಡ,
ಚಳ್ಳಕೆರೆ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಸಾಯಿಕೀರ್ತನಾ ಎಸ್ ಹಾಗೂ ಚಿತ್ರದುರ್ಗ ತಾಲ್ಲೂಕು ಭರಮಸಾಗರ ಡಿ.ವಿ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ನಿತಿನ್ ಹೆಚ್.ಎಸ್. ಅವರು 625ಕ್ಕೆ 622 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಉಳಿದಂತೆ ಚಿತ್ರದುರ್ಗ ತಾಲ್ಲೂಕು ಹಳವುದರ ಜ್ಞಾನಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿ ಸಹನ ಜೆ ಹಾಗೂ ಹೊಳಲ್ಕೆರೆ ಎಂ.ಎಂ.ಪ್ರೌಢಶಾಲೆ ವಿದ್ಯಾರ್ಥಿ ರಕ್ಷಾ ಟಿ 625ಕ್ಕೆ 620 ಅಂಕ ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.
282 ಶಾಲೆಗಳಲ್ಲಿ ಶೇ.100 ಫಲಿತಾಂಶ: ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಜಿಲ್ಲೆಯ 282 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಈ ಪೈಕಿ 131 ಸರ್ಕಾರಿ ಶಾಲೆಗಳಾದರೆ, 53 ಅನುದಾನಿತ ಶಾಲೆಗಳು ಹಾಗೂ ಅನುದಾನರಹಿತ 98 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.