ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಅಭ್ಯರ್ಥಿಗಳು ಯಾರು ಎನ್ನುವುದು ಮುಖ್ಯವಲ್ಲ ಹೊರಗಿನಿಂದ ಬರುವವರು ಇಲ್ಲಿ ಗೆದ್ದುಕೊಂಡು ಹೋಗಲು ಬಿಡುವುದಿಲ್ಲ ಎನ್ನುವ ಸಂಕಲ್ಪ ಮಾಡಿ ಎಂದು ಪದಾಧಿಕಾರಿಗಳಿಗೆ ಬಿಜೆಪಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೇಷ್ಠ ಪಡಿವಾಳ್ ಸೂಚಿಸಿದರು.
ಚಳ್ಳಕೆರೆ ಗೇಟ್‍ನಲ್ಲಿರುವ ಇಂಡಿಯನ್ ಇಂಟರ್ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನು ಗೆಲ್ಲಿಸಿ ಪಕ್ಷಕ್ಕೆ ಕೊಡುಗೆಯಾಗಿ ನೀಡುವ ಜವಾಬ್ದಾರಿ ನಿಮ್ಮಗಳ ಮೇಲಿದೆ. ಪಕ್ಷದ ವಿಚಾರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ನಿರಂತರತೆ ಕಡೆಗೆ ಸಾಗಲು ಅನುಕೂಲವಾಗಲಿದೆ. ಬೂತ್ ಮತ್ತು ಮಹಾಶಕ್ತಿ ಕೇಂದ್ರಗಳಲ್ಲಿ ಸಂಘಟನೆಯಾಗಬೇಕು. ಕಾರ್ಯಕರ್ತರು ಸೇರಿದಂತೆ ಮಹಿಳಾ ಅಧ್ಯಕ್ಷರುಗಳ ಮೇಲೂ ಹೆಚ್ಚಿನ ಜವಾಬ್ದಾರಿಯಿದೆ ಎಂದು ಹೇಳಿದರು.
ಇದು ಚುನಾವಣೆ ಸಮಯವಾಗಿರುವುದರಿಂದ ನಿಮ್ಮ ಮುಂದಿನ ರಾಜಕೀಯ ಭವಿಷ್ಯ ಇದರಲ್ಲಿ ಅಡಗಿದೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಐದು ಕಡೆ ಬಿಜೆಪಿ.ಶಾಸಕರುಗಳಿದ್ದಾರೆ. ಉಳಿದ ಇನ್ನೊಂದು ಕ್ಷೇತ್ರವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕಾಗಿರುವುದರಿಂದ ಈಗಿನಿಂದಲೇ ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳಿ ಎಂದು ಪದಾಧಿಕಾರಿಗಳಿಗೆ ತಿಳಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡುತ್ತ ಬೂತ್ ಕೇಂದ್ರ ಮತ್ತು ಮಹಾಶಕ್ತಿ ಕೇಂದ್ರಗಳಲ್ಲಿ ನಿಕಟ ಸಂಪರ್ಕವಿಟ್ಟುಕೊಂಡಾಗ ಮಾತ್ರ ಪಕ್ಷದ ಅಲೆಯಲ್ಲಿ ನೀವುಗಳು ಗಟ್ಟಿಯಾಗಿ ನಿಲ್ಲಬಹುದು. ಇಲ್ಲದಿದ್ದರೆ ಯಾರೋ ಬಂದು ಇಲ್ಲಿ ಚುನಾವಣೆಯಲ್ಲಿ ಗೆದ್ದುಕೊಂಡು ಹೋಗಲು ದಾರಿ ಮಾಡಿಕೊಟ್ಟಂತಾಗುತ್ತದೆ. ಮಂಡಲ, ಮೋರ್ಚಾಗಳ ಅಧ್ಯಕ್ಷರು ಮೈಚಳಿ ಬಿಟ್ಟು ಜವಾಬ್ದಾರಿಯಿಂದ ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಪದಾಧಿಕಾರಿಗಳಿಗೆ ಹೇಳಿದರು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಉಳಿಸಿಕೊಂಡು ಮತ್ತೊಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ಚುನಾವಣೆಯಲ್ಲಿ ಗೆಲ್ಲಬೇಕಿದೆ. ರಾಜ್ಯದ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು ಪ್ರವಾಸ ಮಾಡುತ್ತಾರೆ. ಮೋರ್ಚಾ, ಬೂತ್ ಕಾರ್ಯಕರ್ತರ ಸಮಾವೇಶವಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದ ಬೂತ್‍ಗೆ ಜಿಲ್ಲಾ ಸಮಿತಿ ಪ್ರವಾಸ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಇತಿಹಾಸ ಸೃಷ್ಠಿಸಿವೆ. ಮೈಕೊಡವಿಕೊಂಡು ಎದ್ದೇಳಬೇಕೆಂದು ಜಿಲ್ಲಾ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ವಿಭಾಗೀಯ ಪ್ರಭಾರಿ ಪ್ರೇಮ್‍ಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜೈಪಾಲ್, ರಾಜೇಶ್‍ಬುರುಡೆಕಟ್ಟೆ, ನರೇಂದ್ರಹೊನ್ನಾಳ್, ಉಪಾಧ್ಯಕ್ಷರುಗಳಾದ ಕಲ್ಲೇಶಯ್ಯ, ಸಂಪತ್‍ಕುಮಾರ್, ಚಂದ್ರಿಕಾ ಲೋಕನಾಥ್, ಯುವ ಮುಖಂಡರಾದ ಡಾ.ಸಿದ್ದಾರ್ಥ, ರಘುಚಂದನ್, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.