ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 20 : ಅಂಬೇಡ್ಕರ್ ಹೆಸರೇಳುವ ಬದಲು ದೇವರನ್ನು ಜಪಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಕೇಂದ್ರ ಗೃಹ ಸಚಿವ ಅಮಿತ್‍ಷಾ ದುರಹಂಕಾರದ ಮಾತುಗಳನ್ನಾಡಿರುವುದನ್ನು ಖಂಡಿಸಿ ಎಸ್.ಡಿ.ಪಿ.ಐ. ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಟೆ ಸಂವಿಧಾನವನ್ನು ರಚಿಸಿಲ್ಲ. ದೇಶದ ಪ್ರತಿಯೊಬ್ಬರು ಸ್ವಾಭಿಮಾನ, ಸಮಾನತೆಯಿಂದ ಬದುಕಲಿ ಎನ್ನುವ ಉದ್ದೇಶದಿಂದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಮಿತ್‍ಷಾ ಕೇಂದ್ರ ಗೃಹ ಮಂತ್ರಿಯಾಗಿದ್ದಾರೆಂದರೆ ಸಂವಿಧಾನ ಕಾರಣ. ಕೇಂದ್ರದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೊಂಡು ಬರುತ್ತಿದೆ. ಈಗ ಅಂಬೇಡ್ಕರ್ ಬಗ್ಗೆಯೆ ಹಗುರವಾಗಿ ಮಾತನಾಡಲು ಶುರು ಮಾಡಿದ್ದಾರೆ. ಹಾಗಾಗಿ ಪ್ರಧಾನಿ ಮೋದಿರವರು ಮೌನ ಮುರಿದು ಅಮಿತ್‍ಷಾ ವಿರುದ್ದ ಕಾನೂನು ಕ್ರಮ ಕೈಗೊಂಡು ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾಕಾರರು ಬೆದರಿಕೆ ಹಾಕಿದರು.
ಎಸ್.ಡಿ.ಪಿ.ಐ. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಶತ ಶತಮಾನಗಳಿಂದಲೂ ಶೋಷಣೆ ಅನುಭವಿಸಿಕೊಂಡು ಬರುತ್ತಿರುವವರು ಸ್ವಾಭಿಮಾನಿಯಾಗಿ ಬದಕಲಿ ಎನ್ನುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆನ್ನುವುದನ್ನು ಮರೆತು ಅಮಿತ್‍ಷಾ ತಮ್ಮ ಮನುಸ್ಮøತಿಯನ್ನು ಹೊರಹಾಕಿದ್ದಾರೆ. ತಕ್ಷಣವೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್, ಸುಬಾನುಲ್ಲಾ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.