ಸುದ್ದಿಒನ್, ಚಿತ್ರದುರ್ಗ, ಜ ,25 : ಅಂಧಕಾರದಲ್ಲಿ ಇರುವ ಬಹುಭಾಗದ ಭೂಮಿಯನ್ನು ಬೆಳಕಿನೆಡೆಗೆ ಕರೆದುಕೊಂಡು ಹೋಗುವಂತಹ ಪ್ರಾರಂಭದ ದಿನ. ಇದಕ್ಕೆ ಸೂರ್ಯ ಜಯಂತಿ ಅಥವಾ ಸೂರ್ಯ ಹುಟ್ಟಿದ ದಿನ ಅಂತಲೂ ಕರೆಯುತ್ತಾರೆ. ಈ ಒಂದು ಅಪರೂಪದ ದಿನವನ್ನು ದೇಶಾದಾದ್ಯಂತ ಅರ್ಥಪೂರ್ಣವಾಗಿ ವಿಶೇಷತೆಯಿಂದ 108 ಸೂರ್ಯ ನಮಸ್ಕಾರವನ್ನ ಸಾಮೂಹಿಕವಾಗಿ ರಥಸಪ್ತಮಿಯ ಮೂಲಕ ಆಚರಿಸುವ ಪದ್ಧತಿ ರೂಢಿಯಲ್ಲಿದೆ. ಇದೊಂದು ಸೂರ್ಯನಿಗೆ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಿದರೂ ನಾವು ಮಾಡುತ್ತಿರುವುದು ನಮ್ಮ ದೇಹಕ್ಕೆ .ಈ ಶಶೀರದ ಎಲ್ಲ ಅಂಗಾಂಗ ಸಂರಕ್ಷಣೆಯ ಮೂಲಕ ಸದೃಢ ಆರೋಗ್ಯಕ್ಕೆ ಕ್ಷೇಮಕ್ಕಾಗಿಯೇ ಆಗಿದೆ .ಇದರಿಂದ ನಿತ್ಯದಲ್ಲಿ ನಾವು ಚೈತನ್ಯದಾಯಕ, ಅಂದಿನ ಕೆಲಸಗಳನ್ನು ಕ್ರಿಯಾಶೀಲವಾಗಿ ಮಾಡಲು ಉತ್ತೇಜನ ಅಥವಾ ಪ್ರೇರಣೆ ನೀಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಯೋಗ ಸಂಸ್ಥೆ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮವು ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಶಾಲಾ ಆವರಣದಲ್ಲಿಂದು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ವಿವಿಧ ಕ್ಷೇತ್ರಗಳಲ್ಲಿ ಸಾರ್ವಜನಿಕವಾಗಿ ಗುರುತಿಸಿಕೊಂಡವರು ನಮ್ಮಂತಹ ಇತರೆ ವ್ಯಕ್ತಿಗಳಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಇಲ್ಲವೇ ಬೇರೆ ಬೇರೆ ಕೆಲಸಗಳನ್ನು ಮಾಡಿಸಿಕೊಡಲು ಸಹಯಕ್ಕಾಗಿ ಬರುತ್ತಾರೆ. ಅವರಿಗೆ ಸಹಾಯ ಇಲ್ಲವೇ ಸೂಕ್ತ ನಿರ್ದೇಶನ ನೀಡಿ ಉಪಕಾರ ಮಾಡಬೇಕಾಗುತ್ತದೆ. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ವಿಶೇಷ ಗುಣಗಳು ಇರುತ್ತವೆ. ಅಂತಹವರು ಬೇರೆಯವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ತಮ್ಮಲ್ಲಿನ ಗುಣಗಳನ್ನು ದಾನ ಮಾಡಿದಾಗ ಅದು ಸೂರ್ಯನ ಗುಣ ವಿಶೇಷಕ್ಕೆ ಸಮ ಎಂದ ಅವರು ಅದು ಹೇಗೆ ಎಂದರೆ ಪ್ರಪಂಚದ ಸಕಲ ಜೀವರಾಶಿಗಳಿಗೆ ಸೂರ್ಯನ ಉದಯ ಹೇಗೆ ಪ್ರೇರಣೆ, ಚೈತನ್ಯದಾಯಕವಾಗಬಲ್ಲದೋ ಹಾಗೆ ನಾವು ಸದ್ಗುಣಗಳನ್ನು ಬಚ್ಚಿಟ್ಟುಕೊಳ್ಳದೆ ಅವನ್ನ ಬೇರೆಯವರಿಗೆ ಸಹಾಯ ರೂಪದಲ್ಲಿ ಧಾರೆ ಎರೆದಾಗ ನಿಮ್ಮ ವ್ಯಕ್ತಿತ್ವಕ್ಕೆ ಒಳಪು ಬರುತ್ತದೆ ಎಂದರು.
ಯೋಗಾಚಾರ್ಯ ಚಿನ್ಮಯಾನಂದ ಅವರು ತಾವು ಕಲಿತ ವಿದ್ಯೆಯನ್ನು ತಾವೊಬ್ಬರೇ ಮಾಡುತ್ತಾ ಇರಬಹುದಿತ್ತು. ಆದರೆ ಅವರು ಹಾಗೆ ಮಾಡದೆ, ಅದನ್ನು ಸಾವಿರಾರು ಜನರಿಗೆ ಕಲಿಸುವ ಮೂಲಕ ಸಮಾಜಕ್ಕೆ ಒಂದು ರೀತಿಯಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವುದು ಆರೋಗ್ಯಕರ ಸಮಾಜಕ್ಕೆ ಪರೋಕ್ಷವಾಗಿ ಯೋಗಗುಣ ಧರ್ಮವನ್ನು ದಾನ ಮಾಡುತ್ತಿದ್ದಾರೆಂದು ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆ ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಅವರು ಮಾತನಾಡುತ್ತಾ ಸೂರ್ಯ ಅವರಿವರೆಂದು ಭೇದ ಭಾವ ಮಾಡದೆ , ಸಕಲರಿಗೂ ನಿಗಧಿತ ವೇಳೆಗೆ ಸರಿಯಗಿ ಭೂಮಿ ಮೇಲೆ ತನ್ನ ಕಿರಣಗಳನ್ನ ಸೂಸಿ ಎಲ್ಲ ಜೀವರಾಶಿಗೆ ಹೇಗೆ ಚೇತನ ಶಕ್ತಿಯಾಗಬಲ್ಲುದೋ ಹಾಗೆ ನಾವು ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದರೆ ಆಗ ದೊರಕುವ ಆನಂದದ ಅರಿವು ಬೇರೆ ಯಾವುದಕ್ಕೂ ಸಮ ಅಲ್ಲ. ಹಾಗೆ ನಮ್ಮ ಚಿತ್ರದುರ್ಗ ನಗರದಲ್ಲಿ ಈಗಾಗಲೇ ಅನೇಕ ಯೋಗ ಶಾಖೆಗಳಿವೆ. ಅದರ ಮುಖ್ಯಸ್ಥರು, ಪದಾಧಿಕಾರಿಗಳು ಆಗಾಗ ಒಂದೆಡೆ ಸೇರುವ, ಸಂಘಟನೆ ಇನ್ನಷ್ಟು ಬಲಗೊಳಿಸುವ ಮತ್ತು ಇದರಿಂದ ಸಾರ್ವಜನಿಕರಿಗೆ ಮತ್ತೆ ಯಾವ ರೀತಿ ಸೇವೆ ಸಲ್ಲಿಸಬಹುದೆಂಬ ತೀರ್ಮಾನ ಮಾಡುತ್ತಾ ಮುಂದೆ ಸಾಗಿದಾಗ ಇನ್ನಷ್ಟು -ಮತ್ತಷ್ಟು ಕೊಡುಗೆ ಯೋಗ ಸಂಘಟನೆಗಳಿಂದ ಸಾಧ್ಯವಾಗಬಹುದು ಎಂದು ಸಲಹೆ ನೀಡಿದರು.
ಇನ್ನೋರ್ವ ಅತಿಥಿಯಾಗಿದ್ದ ಶೃಂಗೇರಿಮಠದ ಯೋಗ ಶಾಖೆಯ ಹಿರಿಯರಾದ ರಾಜಣ್ಣ ಅವರು ಮಾತನಾಡುತ್ತಾ ಯೋಗಕ್ಕೆ ಚಿತ್ರದುರ್ಗ ಜಿಲ್ಲೆ ಒಂದು ಭದ್ರ ಬುನಾಧಿಯಂತಿದೆ. ಕಾರಣ ಮಲ್ಲಾಡಿಹಳ್ಳಿ ರಾಘವೇಂದ್ರ ಮಹಾಸ್ವಾಮಿಗಳು ಇದರ ಮುಖ್ಯಸ್ಥರಾಗಿ ಬಹಳ ಕೊಡುಗೆಯನ್ನು ನೀಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಚಿನ್ಮಯಾನಂದರವರು ಯೋಗದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಅದನ್ನು ನಾವು ನೀವು ಎಲ್ಲರೂ ಮುಂದುವರೆಸಿಕೊಂಡು ಹೋಗಬೇಕೆಂದು ವಿನಂತಿಸಿದರು.
ವೇದಿಕೆಯಲ್ಲಿ ವಿದ್ಯಾ ವಿಕಾಸ ಶಾಖೆಯ ತರಬೇತಿ
ದಾರ ವೆಂಕಟೇಶ್ ಸಂಘಟಿಸಿ. ಉಪಸ್ಥಿತಿತರಿದ್ದರು.
ಸಮಾರಂಭದ ಆರಂಭಕ್ಕೆ ಸೂರ್ಯನುದಯ ತಾವರೆಗೆ ಜೀವಾಳ ಎನ್ನುವ ಬಸವಣ್ಣನವರ ವಚನವನ್ನು ಕೋಕಿಲ ಎಂ.ಜೆ ಅವರು ಹಾಡುವ ಮೂಲಕ ಸಮಾರಂಭ ಆರಂಭವಾಯಿತು. ಯೋಗ ಸಂಘಟಕ ಪರುಷರಾಮ್ ಅವರು ಸ್ವಾಗತಿಸಿದರು. ಶಿಕ್ಷಕಿ ಹಾಗೂ ಯೋಗ ತರಭೇತುದಾರರೂ ಆದ ವಿಮಲಾಕ್ಷಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.
ನಗರದ ವಿವಿಧ ಬಡಾವಣೆಯ ಯೋಗ ಶಾಖೆಯ ಶಿಕ್ಷಕರು, ತರಬೇತಿದಾರರು ಹಾಗೂ ಯೋಗ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿ ಬಹುತೇಕ ಎಲ್ಲರೂ 108 ಸೂರ್ಯ ನಮಸ್ಕಾರ ಮಾಡುವುದರ ಮೂಲಕ ವಿಶೇಷ ಕಳೆ ತಂದರು.






