ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಏ.19) : ಮತದಾನ ನಿಮ್ಮ ಹಕ್ಕು ತಪ್ಪದೇ ಮತ ಹಾಕಿ, ಸದೃಢ ಭಾರತ ನಿರ್ಮಿಸಿ, ವೋಟ್ ಫಾರ್ ಬೆಟರ್ ಇಂಡಿಯಾ, ನಮ್ಮ ಮತ ನಮ್ಮ ಹಕ್ಕು, 18 ವರ್ಷದ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಶ್ರೇಷ್ಟ ನಾಯಕನನ್ನೇ ಆಯ್ಕೆ ಮಾಡಿ, ಮತದಾನ ಒಂದು ಶಕ್ತಿ, ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ, ಓಟ್ ಫಾರ್ ಕರ್ನಾಟಕ, 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನದ ಹಕ್ಕು, ಮತದಾನ ಸಂಭ್ರಮವಾದಾಗ ದೇಶ ಬದಲಾಗುತ್ತೆ, ಜಾಗೃತ ಮತದಾರ ಸದೃಢ ಪ್ರಜಾಪ್ರಭುತ್ವ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಕಡ್ಡಾಯ ಮತದಾನದ ಮೂಲಕ ಗಣರಾಜ್ಯ ದೀಪ ಬೆಳಗೋಣ ಎಂಬ ಸಂದೇಶಗಳು ಚಿತ್ತಾಕರ್ಷಕ ರಂಗೋಲಿ ಮೂಲಕ ನೋಡುಗರಲ್ಲಿ ಮತದಾನ ಜಾಗೃತಿ ಹಾಗೂ ಮಹತ್ವನ್ನು ಸಾರಿದವು.
ಮತದಾನ ಪ್ರಮಾಣ ಹೆಚ್ಚಳ, ನೈತಿಕ ಹಾಗೂ ಕಡ್ಡಾಯ ಮತದನಾಕ್ಕೆ, ವೈವಿಧ್ಯಮಯ ಹಾಗೂ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಜೆ.ಸಿ.ಆರ್.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪದ ಗಣೇಶ ದೇವಸ್ಥಾನ ಮುಂಭಾಗದಲ್ಲಿ, ವಿಶಿಷ್ಟ ರೀತಿಯಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸುವ ಮೂಲಕ ಮತದಾನ ಜಾಗೃತಿಗೆ ಮತ್ತಷ್ಟು ಮೆರಗು ನೀಡಿತು.
ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಯ ನೂರಾರು ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡು ಮತದಾನ ಜಾಗೃತಿಗಾಗಿ ಕಣ್ಮನ ಸೆಳೆಯುವ ಬಣ್ಣ ಬಣ್ಣದ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಮೇ 10ರಂದು ನಡೆಯುವ ವಿಧಾನಸಭೆ ಸಾರ್ವತ್ರಿಕ ಚನಾವಣೆ ಅಂಗವಾಗಿ ಜಿಲ್ಲೆ ವಿವಿಧೆಡೆ ವೈವಿಧ್ಯಯಮ ಹಾಗೂ ವಿನೂತನವಾಗಿ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಗ್ರಾಮೀಣ ಪ್ರದೇಶಕ್ಕೆ ಹೋಲಿಕೆ ಮಾಡಿದಾಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಕಡಿಮೆ ಇದೆ. ಹಾಗಾಗಿ ನಗರ ಪ್ರದೇಶದ ಮತದಾರರು ಮೇ 10ರಂದು ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ತಮ್ಮ ಮತ ಚಲಾಯಿಸಬೇಕು ಎಂದು ಹೇಳಿದರು.
ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಉತ್ತಮ ರಂಗೋಲಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಮತದಾನದ ಕುರಿತು ಅರಿವು ಮೂಡಿಸುವ ಸಲುವಾಗಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಆಶಾ ಕಾರ್ಯಕರ್ತರು, ಅಂಗನಾಡಿ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳು, ಎನ್‍ಜಿಒ ಸೇರಿದಂತೆ ಪೌರಕಾರ್ಮಿಕರು ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಓ ಎಂ.ಎಸ್.ದಿವಾಕರ, ತಾ.ಪಂ.ಇಓ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಎಂ.ಸಿ.ಸಿ ನೋಡೆಲ್ ಅಧಿಕಾರಿ ಹನುಮಂತಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಫೋಟೋ ವಿವರ: ಚಿತ್ರದುರ್ಗ ನಗರದ ಜೆ.ಸಿ.ಆರ್.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪದ ಗಣೇಶ ದೇವಸ್ಥಾನ ಮುಂಭಾಗದಲ್ಲಿ ಬುಧವಾರ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರಿಂದ ಮತದಾನ ಜಾಗೃತಿಗಾಗಿ ರಂಗೋಲಿ ಸ್ಪರ್ಧೆ ಹಾಗೂ ಜಾಥಾ ಕಾರ್ಯಕ್ರಮ ನಡೆಯಿತು.