ಸುದ್ದಿಒನ್, ಚಿತ್ರದುರ್ಗ, (ಅ.31) : 66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ 66 ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 2021ರ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಜಿಲ್ಲೆಯ ಪ್ರೊ.ಡಿ.ಟಿ.ರಂಗಸ್ವಾಮಿಯವರು ಭಾಜನರಾಗಿದ್ದಾರೆ.
ಸಾಹಿತ್ಯರತ್ನ ಪ್ರೊ ಡಿ.ಟಿ.ರಂಗಸ್ವಾಮಿಯವರು 09-06-19230 ರಂದು ಹೊರಕೆರದೇವರಪುರದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತನ್ನ ಸ್ವಗ್ರಾಮದಲ್ಲಿಯೇ ಪೂರೈಸಿ ಪ್ರೌಢಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ಚಿತ್ರದುರ್ಗ ಮಹಾರಾಜ ಕಾಲೇಜು ಮೈಸೂರಿನಲ್ಲಿ ಎಂ.ಎ. ಪದವಿಯನ್ನು ಪಡೆದರು.
ಸಾಹಿತ್ಯಾಸಕ್ತರಾದ ಪ್ರೊ ಡಿ.ಟಿ.ರಂಗಸ್ವಾಮಿ 1955 ರಿಂದ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿ ರೀಡರ್, ಪ್ರೊಫೆಸರ್, ಪ್ರಾಂಶುಪಾಲರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಆಡಳಿತ ಕನ್ನಡ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡದಲ್ಲಿ ಸುಮಾರು 50 ಗ್ರಂಥಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ಹುಟ್ಟೂರಿನಲ್ಲಿ ಆರೋಗ್ಯ ಕೇಂದ್ರ, ಉಚಿತ ಕಲ್ಯಾಣ ಮಂಟಪ ನಿರ್ಮಿಸಿ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
1942 ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಇವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಇಡೀ ಜಿಲ್ಲೆಗೆ ಖುಷಿ ತಂದುಕೊಟ್ಟಿದೆ.