ಚಿತ್ರದುರ್ಗ : ಮಳೆಗೆ ತೋಟಗಾರಿಕೆ ಬೆಳೆಗಳು ನಾಶ : ಪರಿಹಾರಕ್ಕಾಗಿ ರೈತರ ಪ್ರತಿಭಟನೆ

1 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23  : ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈರುಳ್ಳಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿರುವುದರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಡಿ.ಎಸ್.ಹಳ್ಳಿ, ಜೋಡಿಚಿಕ್ಕೇನಹಳ್ಳಿ, ತೋಪುರಮಾಳಿಗೆ, ದ್ಯಾಮವ್ವನಹಳ್ಳಿ, ಕಾಸವರಹಟ್ಟಿ, ದಂಡಿನಕುರುಬರಹಟ್ಟಿ, ನರೇನಾಳ್, ಜೆ.ಎನ್.ಕೋಟೆ, ಎಣ್ಣೆಗೆರೆ ಇನ್ನು ಮುಂತಾದ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿರುವ ಚೀಕಲು ಈರುಳ್ಳಿಯನ್ನು ಪ್ರದರ್ಶಿಸಿದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷದ ಬರಗಾಲವನ್ನೆ ರೈತರು ಇನ್ನು ಸುಧಾರಿಸಿಕೊಳ್ಳಲು ಆಗದೆ ಸಾಲಗಾರರಾಗಿದ್ದಾರೆ. ಆರಂಭದಲ್ಲಿ ಉತ್ತಮ ಮಳೆಯಾಯಿತಾದರೂ ಕಳೆದ ಇಪ್ಪತ್ತು ದಿನಗಳಿಂದ ಸುರಿದ ಮಳೆಗೆ ಈರುಳ್ಳಿ ಹಾಗೂ ಇನ್ನಿತರೆ ತೋಟಗಾರಿಕೆ ಬೆಳೆಗಳು ಕೊಳೆತು ನಾಶವಾಗಿವೆ. ಕೃಷಿಗಾಗಿ ಸಾಲ ಮಾಡಿರುವ ರೈತ ಒಕ್ಕಲುತನಕ್ಕೆ ಹಾಕಿದ ಬಂಡವಾಳವೂ ಕೈಗೆ ಸಿಗದೆ ಕಂಗಾಲಾಗಿದ್ದಾನೆ. ತಕ್ಷಣವೆ ಬೆಳೆ ಸಮೀಕ್ಷೆ ನಡೆಸಿ ಹಾನಿಗೊಳಗಾಗಿರುವ ರೈತರಿಗೆ ಬೆಳೆ ಪರಿಹಾರ ಕೊಡಬೇಕು. ಬೆಳೆವಿಮೆಗೊಳಪಟ್ಟವರಿಗೆ ತಡ ಮಾಡದೆ ಬೆಳೆ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಹೆಚ್ಚಾಗಿ ಖುಷ್ಕಿ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆದಿದ್ದು, ಖರೀಧಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಗೆ ಖರೀಧಿಸಿ ಜಿಲ್ಲಾಡಳಿತ ರೈತರ ನೆರವಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ತಾಲ್ಲೂಕು ಅಧ್ಯಕ್ಷ ಬಿ.ಇ.ಮಂಜುನಾಥ, ರಾಮರೆಡ್ಡಿ, ಮಹಂತೇಶ್‍ರೆಡ್ಡಿ, ರಾಜಶೇಖರ್, ರಾಮರೆಡ್ಡಿ, ಪರಶಿವಣ್ಣ, ಪ್ರವೀಣ, ಮಾರುತಿ, ಸದಾಶಿವ, ನಾಗರಾಜ್‍ರೆಡ್ಡಿ, ಸುರೇಶ್‍ರೆಡ್ಡಿ, ಕೃಷ್ಣಪ್ಪ, ಲೋಕೇಶ, ಶಶಿಧರ, ಕೇಶವರೆಡ್ಡಿ, ಹರಳಯ್ಯ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *