ಚಿತ್ರದುರ್ಗ | ಪಿ.ಸಿ.ಪಿ.ಎನ್.ಡಿ.ಟಿ ಸಲಹಾ ಸಮಿತಿಯ ಅಧ್ಯಕ್ಷರಾಗಿ ಡಾ. ಸೌಮ್ಯ ನೇಮಕ

2 Min Read

ಚಿತ್ರದುರ್ಗ. ಜುಲೈ.06:  ಪಿ.ಸಿ.ಪಿ.ಎನ್.ಡಿ.ಟಿ (ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರ ವಿಧಾನಗಳು (ಲಿಂಗ ಆಯ್ಕೆ ನಿಷೇಧ) ಕಾಯ್ದೆ ಅನುಸಾರ ಸಲಹಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಸಲಹಾ ಸಮಿತಿ ಅಧ್ಯಕ್ಷರಾಗಿ ಚಿತ್ರದುರ್ಗದ ಖಾಸಗಿ ನರ್ಸಿಂಗ್ ಹೋಂನ ತಜ್ಞ ವೈದ್ಯೆ ಡಾ.ಸೌಮ್ಯ, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಸದಸ್ಯರುಗಳಾಗಿ, ಡಾ.ದೇವರಾಜು, ಡಾ.ಸತ್ಯನಾರಾಯಣ, ಕಾನೂನು ಸಲಹೆಗಾರರಾಗಿ ವಕೀಲ ಉಮೇಶ್, ಸರ್ಕಾರೇತರ ಸ್ವಯಂ ಸೇವಾ ಸಂಘದ ಮೀನಾಕ್ಷಿ, ಗಾಯಿತ್ರಿ ಶಿವರಾಂ, ಜಿ.ಎಸ್.ಗೌಡ ಸೇರಿದಂತೆ ಜಿಲ್ಲಾ ವಾರ್ತಾಧಿಕಾರಿ, ಸರ್ಕಾರಿ ಅಭಿಯೋಜಕರು ಕಾರ್ಯನಿರ್ವಹಿಸಲಿದ್ದಾರೆ.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಲಹಾ ಸಮಿತಿ ಸಭೆ ಜರುಗಿತು.

ಸಭೆಯಲ್ಲಿ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮಾತೃತ್ವ ಮೆಟರ್‍ನಿಟಿ ಮತ್ತು ಫರ್ಟಿಲಿಟಿ ಸೆಂಟರ್ ಹೊಸ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ತೆರೆಯಲು ಅನುಮತಿ ನೀಡಲಾಯಿತು. ಹೊಸದುರ್ಗದ ಮಾರುತಿ ನರ್ಸಿಂಗ್ ಹೋಂ, ಚಿತ್ರದುರ್ಗ ನಗರದ ಗುರು ಕೊಟ್ಟೂರೇಶ್ವರ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್‍ಗಳ ನೊಂದಣಿಗಳನ್ನು ಪುನಃ ನವೀಕರಿಸಲಾಯಿತು.

ಹೊಸದುರ್ಗದ ಶಾರದಾ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್, ಹಿರಿಯೂರಿನ ಸಾಯಿ ಶ್ರೀನಿವಸ ಡಯೋಗ್ನೋಸಿಸ್ ಸೆಂಟರ್‍ಗಳ ವಿಳಾಸ ಬದಲಾವಣೆಗೆ ಅನುಮತಿ ನೀಡಲಾಯಿತು. ನಗರದ ಪಶುಸಂಗೋಪನೆ ಇಲಾಖೆಯ ಪಾಲಿ ಕ್ಲಿನಿಕ್, ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ನೋಂದಣಿ ಅವಧಿ ಮುಕ್ತಾಯವಾಗಿದ್ದು, ನವೀಕರಿಸಿಕೊಳ್ಳುವಂತೆ ಪಶು ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಹಿರಿಯೂರಿನ ಬಾಲಾಜಿ ನರ್ಸಿಂಗ್ ಹೋಂ ಮತ್ತು ಡೆಂಟಲ್ ಕ್ಲಿನಿಕ್ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಇವರು ಹೊಸದಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಖರೀದಿಸಿದ ನಂತರ ಹೊಸದಾಗಿ ನೊಂದಣಿ ಮಾಡಬೇಕು. ಬಸವೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಇಲ್ಲಿ ಪ್ರಾತ್ಯಕ್ಷಿತೆಗಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಬಳಸಲು ರಾಜ್ಯ ಮಟ್ಟದಲ್ಲಿ ಅನುಮತಿ ಪಡೆಯಲು ತಿಳಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ವೇದಾಂತ ಆಸ್ಪತ್ರೆ, ಚಿತ್ರದುರ್ಗ ಇವರು ಹೊಸದಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಆರಂಭಿಸಲು ಸಲ್ಲಿಸಿದ ಅರ್ಜಿಯನ್ನು ತಜ್ಞ ರೇಡಿಯಾಲಜಿಸ್ಟ್ ಇಲ್ಲದ ಕಾರಣ ಅರ್ಜಿಯನ್ನು ತಿರಸ್ಕರಿಸಲಾಯಿತು.

ಸ್ಕ್ಯಾನಿಂಗ್ ಕೊಠಡಿಗೆ ಅನ್ಯರ ಪ್ರವೇಶ ನಿಷೇಧ : ಗರ್ಭಿಣಿಯರ ಸ್ಕ್ಯಾನಿಂಗ್ ವೇಳೆ ಸ್ಕ್ಯಾನಿಂಗ್ ಕೊಠಡಿಯೊಳಗೆ ಗರ್ಭಿಣಿಯರ ಕುಟುಂಬ ವರ್ಗ, ಹಾಗೂ ಇತರೆ ಸಹಾಯಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ಸ್ಕ್ಯಾನಿಂಗ್ ಯಂತ್ರಕ್ಕೆ ಹೆಚ್ಚುವರಿಯಾಗಿ ಕಂಪ್ಯೂಟರ್ ಮಾನಿಟರ್ ಅಳವಡಿಸುವುದನ್ನು ಸಹ ನಿಷೇಧಿಸಲಾಗಿದೆ.  ಈ ಬಗ್ಗೆ ಮಾಹಿತಿ ಫಲಕವನ್ನು ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ಪ್ರದರ್ಶಿಸಬೇಕು.  ಈ ಅಂಶಗಳನ್ನು ಎಲ್ಲಾ ಸ್ಕ್ಯಾನಿಂಗ್ ಸೆಂಟರ್‍ಗಳು ಪಾಲಿಸುವಂತೆ ಸೂಚನೆ ನೀಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಪಿಸಿಪಿಎನ್‍ಡಿಟಿ ಸಲಹಾ ಸಮಿತಿ ಅಧ್ಯಕ್ಷೆ ಡಾ.ಎಸ್.ಸೌಮ್ಯ, ಸದಸ್ಯರಾದ ಡಾ.ಸತ್ಯನಾರಾಯಣ, ಎಂ.ಉಮೇಶ್, ಕೆ.ಪಿ.ಮೀನಾಕ್ಷಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *