ಚಿತ್ರದುರ್ಗ |  ಪಿ.ಡಿ.ಒ. ಅಮಾನತು : ಜಿ.ಪಂ. ಸಿಇಒ  ಆದೇಶ

1 Min Read

ಚಿತ್ರದುರ್ಗ. ಜುಲೈ.30:  ಗ್ರಾಮ ಪಂಚಾಯತಿಗೆ ಬರಬೇಕಾದ ಸಾರ್ವಜನಿಕ ಹಣದ ದುರುಪಯೋಗ, ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪಕ್ಕಾಗಿ ಭರಮಸಾಗರ ಗ್ರಾಮ ಪಂಚಾಯತಿ ಪಿಡಿಒ ಶ್ರೀದೇವಿ ಅವರನ್ನು ಅಮಾನತುಗೊಳಿಸಿ, ಅವರ ವಿರುದ್ದ ವಿಚಾರಣೆ ಕಾಯ್ದಿರಿಸಿ, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ಭರಮಸಾಗರ ಗ್ರಾ.ಪಂ. ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀದೇವಿ ಅವರು ಕಾನೂನು ಬಾಹಿರವಾಗಿ ಸಾರ್ವಜನಿಕ ವಿರೋಧಿ, ಸರ್ವಾಧಿಕಾರಿ ಧೋರಣೆಯಿಂದ ಕರ್ತವ್ಯ ನಿರ್ವಹಣೆ, ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಬೆಲೆ ಕೊಡದೆ, ಗೌರವ ನೀಡದೆ, ಕಚೇರಿಯ ನೌಕರರನ್ನಾಗಲಿ, ಸಿಬ್ಬಂದಿಯನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಿದ್ದು, ಗ್ರಾ.ಪಂ. ನ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರಿಂದ ರಶೀದಿ ಹಣ ಪಾವತಿಸಿಕೊಂಡು, ಗ್ರಾ.ಪಂ. ಖಾತೆಗೆ ಜಮಾ ಮಾಡದೆ ಹಣ ದುರುಪಯೋಗ ಮಾಡಿರುತ್ತಾರೆಂದು, ಅಲ್ಲದೆ ಕೆಲವು ಇ-ಸ್ವತ್ತುಗಳ ವಿತರಣೆಗೆ ಪಾವತಿಸಲಾದ ಹಣಕ್ಕೆ ರಸೀದಿ ಹಾಕದೆ ಹಣವನ್ನು ಸ್ವಂತಕ್ಕೆ ಉಪಯೋಗಿಸಿರುತ್ತಾರೆ ಎಂಬುದಾಗಿ ಗ್ರಾ.ಪಂ. ಅಧ್ಯಕ್ಷರು, ಗ್ರಾ.ಪಂ. ಸದಸ್ಯರು ನೀಡಿರುವ ದೂರುಗಳ ಕುರಿತು ಜಿ.ಪಂ. ಮುಖ್ಯ ಲೆಕ್ಕಾಧಿಕಾರಿಯವರು ವಿಶೇಷ ಲೆಕ್ಕ ತನಿಖೆ ಕೈಗೊಂಡು ತನಿಖಾ ವರದಿಯನ್ನು ಸಲ್ಲಿಸಿದ್ದರು.

96 ಸಾವಿರ ರೂ. ಗಳಿಗೆ ಸಾರ್ವಜನಿಕರಿಂದ ಶುಲ್ಕ ಪಡೆದು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಮ್ಯಾನ್ಯುಯಲ್‌ನಲ್ಲಿ ಜನರಲ್ ಲೈಸೆನ್ಸ್ ನೀಡಿರುವುದು, ಸೇರಿದಂತೆ ಗ್ರಾ.ಪಂ. ಗೆ ಬರಬೇಕಾದ ಸಾರ್ವಜನಿಕ ಹಣದ ದುರುಪಯೋಗವಾಗಿರಬಹುದೆಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ಅವರು ವರದಿ ಸಲ್ಲಿಸಿದ್ದರು.

ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನೀಡಿದ ನೋಟಿಸ್‌ಗೆ, ಪಿಡಿಒ ಶ್ರೀದೇವಿ ಅವರು ನೀಡಿರುವ ಸಮಜಾಯಿಷಿಯು ಅಸಮಂಜಸವಾಗಿರುವುದರಿAದ ನಿಯಮಾನುಸಾರ ಶ್ರೀದೇವಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಇಓ ಎಸ್.ಜೆ.ಸೋಮಶೇಖರ್ ಆದೇಶದಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *