ಸುದ್ದಿಒನ್, ಚಿತ್ರದುರ್ಗ, ನವಂಬರ್.02 :ಸಿರಿಗೆರೆಯಲ್ಲಿ ನವೆಂಬರ್ 3 ರಿಂದ 5 ರವರೆಗೆ ಜರುಗಲಿರುವ ಮೂರು ದಿನಗಳ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗವಹಿಸುವ ಕನ್ನಡ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಅನ್ಯ ಕಾರ್ಯನಿಮಿತ್ತ(ಒಒಡಿ) ಸೌಲಭ್ಯ ಒದಗಿಸಿದೆ.
ಜಿಲ್ಲೆಯ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳು ಈ ಸೌಲಭ್ಯ ಪಡೆಯಬಹುದಾಗಿದೆ. ಸಿರಿಗೆರೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನ.3 ರಿಂದ ಮೂರು ದಿನಗಳ ಕಾಲ ವಿಶೇಷ ಕರ್ನಾಟಕ ರಾಜ್ಯೋತ್ಸವ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಶಾಲೆ ಮತ್ತು ಕಾಲೇಜುಗಳ ಪಠ್ಯ ಮತ್ತು ಗದ್ಯಗಳ ಲಭ್ಯವಿರುವ ಲೇಖಕರು ಮತ್ತು ಸಾಹಿತಿಗಳನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಮತ್ತು ಪರಂಪರೆ,ಮರೆಯಲಾಗದ ಕನ್ನಡ ಮಹನೀಯರು, ತಂತ್ರಜ್ಞಾನದೊಂದಿಗೆ ಕನ್ನಡ ಬೋಧನೆ ಸೇರಿದಂತೆ ಪ್ರಮುಖ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಗೋಷ್ಠಿಯಲ್ಲಿ ನಾಡಿನ ಗಣ್ಯರು ಹಾಗೂ ಸಾಹಿತಿಗಳು ವಿಷಯಗಳನ್ನು ಮಂಡಿಸಲಿದ್ದಾರೆ. ಸಿರಿಗೆರೆಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಡಾ.ಮಹೇಶ ಜೋಷಿ ಸೇರಿದಂತೆ ರಾಜ್ಯದ ಪ್ರಮುಖ ಕವಿಗಳು ರಾಜ್ಯದ ಎಲ್ಲ ಕಸಾಪ ಜಿಲ್ಲಾಧ್ಯಕ್ಷರು ಭಾಗವಹಿಸಲಿದ್ದಾರೆ.
ಸಾಹಿತ್ಯ,ಸಂಸ್ಕೃತಿ ಸೇರಿದಂತೆ ಪಠ್ಯಪುಸ್ತಕದಲ್ಲಿನ ಗದ್ಯ,ಪಠ್ಯ ಗಳ ಕುರಿತ ಗಂಭೀರ ಚಿಂತನೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜರುಗಲಿದೆ. ಪ್ರತಿದಿನ ಸಂಜೆ ನಾಟಕ,ನೃತ್ಯ ಮತ್ತು ಮನೋರಂಜನ ಕಾರ್ಯಕ್ರಮಗಳು ಜರುಗಲಿವೆ.
ಪ್ರಾಥಮಿಕ,ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರುಗಳಿಗೆ ಒಒಡಿ ಸೌಲಭ್ಯವನ್ನು ಶಿಕ್ಷಣ ಇಲಾಖೆ ನೀಡಲಿದೆ. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೊಂದಣಿ ಮತ್ತು ಭಾಗವಹಿಸಿದ ಎಲ್ಲರು ಈ ಸೌಲಭ್ಯ ಪಡೆಯಬಹುದಾಗಿದೆ.
ಇದನ್ನು ಜಿಲ್ಲೆಯ ಸಾರ್ವಜನಿಕರು, ಸಾಹಿತ್ಯಾಸಕ್ತರು, ಶಿಕ್ಷಕರು ಮತ್ತು ಉಪನ್ಯಾಸಕರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ವಿನಂತಿಸಿದ್ದಾರೆ.