ಚಿತ್ರದುರ್ಗ,( ಡಿಸೆಂಬರ್.28) :ಕೋವಿಡ್-19 ರೋಗ ತಡೆ ಹಿನ್ನಲೆಯಲ್ಲಿ ಕೋವಿಡ್-19 ಸರ್ವೇಕ್ಷಣಾ, ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕಾ ಮಾರ್ಗಸೂಚಿಗಳೊಂದಿಗೆ ಹೆಚ್ಚುವರಿಯಾಗಿ ಇದೇ ಡಿಸೆಂಬರ್ 28 ರಿಂದ ಜಾರಿಗೆ ಬರುವಂತೆ 2022ರ ಜನವರಿ 07 ರವರೆಗೆ ಪ್ರತಿ ದಿನ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ರಾತ್ರಿ ಕಪ್ರ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.
ರಾತ್ರಿ ಕಫ್ರ್ಯೂ ಜಾರಿಗೊಳಿಸುವುದರ ಜೊತೆಗೆ ಇದೇ ಡಿಸೆಂಬರ್ 30 ರಿಂದ 2020ರ ಜನವರಿ 02 ರವರೆಗೆ ರೆಸ್ಟೋರೆಂಟ್, ಹೋಟಲ್, ಕ್ಲಬ್, ಪಬ್‍ಗಳಲ್ಲಿ ಶೇ.50 ಸಾಮಥ್ರ್ಯದೊಂದಿಗೆ ಕಾರ್ಯನಿರ್ವಹಿಸಲು ಮತ್ತು ಇದೇ ಡಿಸೆಂಬರ್ 27 ರಿಂದ ಎಲ್ಲ ರೀತಿಯ ಗುಂಪು ಸೇರುವಿಕೆ, ಸಭೆಗಳು, ಕಾರ್ಯಕಾರಣಿಗಳು, ಮದುವೆ ಸಮಾರಂಭಗಳು ಸೇರಿದಂತೆ ಗರಿಷ್ಟ 300 ಜನರಿಗೆ ಅವಕಾಶ ನೀಡಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ವೈಯಕ್ತಿಕ ಓಡಾಟಗಳು, ಅನಿವಾರ್ಯವಲ್ಲದ ಚಟುವಟಿಕೆಗಳ ಕಾರ್ಯನಿರ್ವಹಣೆಯು ರಾತ್ರಿ 10 ರಿಂದ ಮುಂಜಾನೆ 5 ರವರೆಗೆ ಕಡ್ಡಾಯವಾಗಿ ನಿಷೇಧಿಸಿ ಸಿ.ಆರ್.ಪಿ.ಸಿ ಸೆಕ್ಷನ್ 144 ಜಾರಿಗೊಳಿಸಲಾಗಿರುತ್ತದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಭಾರತೀಯ ದಂಡ ಸಂಹಿತೆಯನ್ವಯ ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು.
ಆದೇಶ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಳ್ಳಲು ಪೊಲೀಸ್ ಅಧೀಕ್ಷಕರು, ಉಪವಿಭಾಗಾಧಿಕಾರಿಗಳು, ಎಲ್ಲ ತಾಲ್ಲೂಕಿನ ತಹಶೀಲ್ದಾರ್‍ಗಳು, ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲ ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದ್ದಾರೆ.