ಚಿತ್ರದುರ್ಗ (ಏ,28): ನಾನು ಚಿತ್ರದುರ್ಗದಿಂದಲೇ ರಾಜಕಾರಣ ಆರಂಭಿಸಿದವನು, ಮುಂದೆ ಶಾಸಕನಾಗಿ ಇಲ್ಲಿಯೇ ಇರುತ್ತೇನೆ.
ಮುಂದಿನ ದಿನಗಳಲ್ಲಿ ನವ ಚಿತ್ರದುರ್ಗ ನಿರ್ಮಾಣಕ್ಕಾಗಿ ಹೊಸಹೊಸ ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತೇನೆ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ತಿಳಿಸಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಚಿತ್ರದುರ್ಗಕ್ಕಾಗಿಯೇ ವಿಶೇಷವಾದ ಪ್ರಣಾಳಿಕೆಯನ್ನು ತಯಾರು ಮಾಡಲಾಗಿದೆ, ಇದರಲ್ಲಿ ಎಲ್ಲಾ ವರ್ಗದ ಜನೆತೆಗೂ ಸಹ ಮಾನ್ಯತೆ ನೀಡಲಾಗಿದೆ, ಮಕ್ಕಳಿಗೆ ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗ, ಮಹಿಳೆಯರಿಗೆ ಸ್ವಾವಲಂಬಿ ಬದುಕು, ಪ್ರತ್ಯೇಕವಾದ ಮಾರುಕಟ್ಟೆ ನಿಮಾರ್ಣ, ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಶುಲಕ್ವಿಲ್ಲದೆ ವ್ಯಾಪಾರ ಮಾಡಲು ಅನುಕೂಲಕರ ವಾತಾವರಣ ನಿರ್ಮಾಣ ಸೇರಿದಂತೆ ಹತ್ತು ಹಲವು ಕನಸುಗಳನ್ನು ಹೊತ್ತಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಚಿತ್ರದುರ್ಗ ವಿಧಾಸಭಾ ಕ್ಷೇತ್ರಕ್ಕೆ ವಿಶೇಷವಾದ ಪ್ರನಾಳಿಕೆ ನೀಡಿದ್ದಾರೆ, ನಮ್ಮ ಸರ್ಕಾರ ರಚನೆಯಾದ ಕೂಡಲೇ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಈಡೇರಿಸುತ್ತೇವೆ, ಚಿತ್ರದುರ್ಗವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬುದು ನನ್ನ ಆಸೆಯಾಗಿದೆ, ಇಲ್ಲಿ ಮತಗಳು ಮಾರಾಟಕ್ಕಿಲ್ಲ, ಮತದಾರರೇ ನನಗೆ ದುಡ್ಡು ಕೊಟ್ಟು ಚುನಾವಣೆ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ನೋಟು ಕೋಟು ಕೊಡುತ್ತೇವೆ ಎಂದು ಮತದಾರರೇ ಹೇಳುತ್ತಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಪಾದಯಾತ್ರೆ ಮಾಡುವುದರ ಮೂಲಕ ಮತದಾರರು ನೀಡಿದ ನೋಟನ್ನು ರೈತರಿಗೆ ಸಮರ್ಪಿಸುತ್ತೇನೆ, ಬಡ ಮಕ್ಕಳು ಸಹ ಉತ್ತಮವಾದ ಶಿಕ್ಷಣವನ್ನು ಪಡೆಯಬೇಕೆಂಬುದು ನನ್ನ ಅಸೆಯಾಗಿದೆ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ನೀಡುವುದರ ಮೂಲಕ ಉತ್ತಮ ಶಿಕ್ಷಣ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುತ್ತೇವೆ ಎಂದರು.
ಜನತೆಯ ಆರೋಗ್ಯದ ಬಗ್ಗೆಯೂ ಸಹ ಹೆಚ್ಚಿನ ಕಾಳಜಿಯನ್ನು ವಹಿಸಿ ದುರ್ಗದಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ಹೈಟೆಕ್ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ನಿರ್ಮಾಣ ಮಾಡುತ್ತೇವೆ, ದುಡಿಯುವ ವರ್ಗಕ್ಕೆ ಕೆಲಸ ನೀಡುವ ಸಲುವಾಗಿ ಬೃಹತ್ ಗಾರ್ಮೆಂಟ್ ಕೈಗಾರಿಕೆ ನಿರ್ಮಾಣ ಮಾಡುತ್ತೇವೆ.
ಇದಲ್ಲದೆ ಚಿತ್ರದುರ್ಗದ ಚಾರಿತ್ರಿಕ ಸ್ಥಳಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡುತ್ತೇವೆ. ಅದರಲ್ಲೂ ಮುಖ್ಯವಾಗಿ ನನ್ನ ಕ್ಷೇತ್ರವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಡಲಾಗಿರುವ 12 ಕೆರೆಗಳನ್ನು ತುಂಬಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವುದು ನನ್ನ ಮಹದಾಸೆ ಎಂದರು.
ತಲಾ ಹತ್ತು ಎಕರೆ ಪ್ರದೇಶದಲ್ಲಿ ರಾಮ ಮಂದಿರ ಮತ್ತು ಮಸೀದಿಯನ್ನು ನಿರ್ಮಾಣ, ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ಥೀಮ್ ಪಾರ್ಕ್ ನಿರ್ಮಾಣ ಹಾಗು ಮುಸ್ಲೀಂ ಸಂಸ್ಕೃತಿಯನ್ನು ಬಿಂಬಿಸುವ ಮ್ಯೂಸಿಯಂ ನಿರ್ಮಾಣ ಮಾಡಿತ್ತೇವೆ.
ಚಿತ್ರದುರ್ಗ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾದ ಸಂಪರ್ಕ ರಸ್ತೆಗಳ ನಿರ್ಮಾಣ, ಸುವ್ಯವಸ್ಥಿತವಾದ ಮಾರುಕಟ್ಟೆ ನಿರ್ಮಾಕ್ಕೆ ಬದ್ದನಾಗಿದ್ದೇನೆ ಇದರ ಜೊತೆಗೆ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಜೂಜು ದಂಧೆಗಳಿಗೆ ಕಡಿವಾಣ ಹಾಕುತ್ತೇನೆ ಎಂದರು.
ಸುದ್ದಿಗೋಷ್ಠಿ ಆರಂಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್, ತಾಲೂಕು ಅಧ್ಯಕ್ಷ ತಿಮ್ಮಣ್ಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್ ಜೋಗಿ ಸೇರಿದಂತೆ ಪಕ್ಷದ ಹಲವು ಮುಖಂಡರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆಂದೇ ಜಿ.ರಘು ಆಚಾರ್ ಅವರ ಕನಸು ಹೊತ್ತ ಚಿತ್ರದುರ್ಗ ನವ ನಿರ್ಮಾಣದ ಪ್ರಣಾಳಿಕೆ ಬಿಡುಗಡೆ ಮಾಡಿದರು.