ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 10 : ಶೀಲ ಶಂಕಿಸಿ ಹೆಂಡತಿಯನ್ನು ಕೊಲೆ ಮಾಡಿದ್ದ ಅಪರಾಧಿ ಹನುಮಂತಪ್ಪನಿಗೆ ಚಿತ್ರದುರ್ಗ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಿದೆ.

ಮೊಳಕಾಲ್ಕೂರು ತಾಲ್ಲೂಕಿನ ಚಿಕ್ಕೇರನಹಳ್ಳಿ ಗ್ರಾಮದಲ್ಲಿ ಆರೋಪಿ ಹನುಮಂತಪ್ಪ ಹೆಂಡತಿ ಸಾವಿತ್ರಮ್ಮ ಅವರೊಂದಿಗೆ ವಾಸವಿದ್ದರು. ಬೇರೆಯವರೊಂದಿಗೆ ಅನೈತಿಕ ಸಂಪರ್ಕ ಹೊಂದಿರುವುದಾಗಿ ಮತ್ತು ಆ ಕಾರಣಕ್ಕಾಗಿ ಪ್ರತಿದಿನವೂ ನನ್ನನ್ನು ಬಿಟ್ಟು ಹೊಲಕ್ಕೆ ಒಬ್ಬಳೇ ಹೋಗುತ್ತೀಯಾ ಎಂದು ಆಕೆಯ ಮೇಲೆ ಪದೇಪದೇ ಅನುಮಾನ ವ್ಯಕ್ತಪಡಿಸುತ್ತಿದ್ದು, ಈ ವಿಚಾರವಾಗಿ ದಿನಂಪ್ರತಿ ಜಗಳವಾಡುತ್ತಿದ್ದರು. ದಿನಾಂಕ 19-7-2023 ರಂದು ಪತ್ನಿ ಸಾವಿತ್ರಮ್ಮನನ್ನು ಮಚ್ಚಿನಿಂದ ಹೊಡೆದು ಸಾಯಿಸಿರುತ್ತಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಪುರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ವಸಂತ ವಿಠಲ್ ಆಸೋಡೆ, ಪೋಲೀಸ್ ವೃತ್ತ ನಿರೀಕ್ಷಕರು, ಮೊಳಕಾಲ್ಮೂರು ಇವರು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ನಂತರ ಪ್ರಕರಣವು ಚಿತ್ರದುರ್ಗ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕನಿ ಅವರು ವಿಚಾರಣೆ ಕೈಗೊಂಡಿದ್ದು, ವಾದ–ವಿವಾದ, ಸಾಕ್ಷಿದಾರರ ಹೇಳಿಕೆ ಆಲಿಸಿ ಆರೋಪಿ ಹನುಮಂತಪ್ಪ ಪತ್ನಿ ಸಾವಿತ್ರಮ್ಮನವರನ್ನು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ರೂ.50,000/- ದಂಡ ವಿಧಿಸಿ ಇಂದು (ಮಾರ್ಚ್. 10) ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕರಾದ ಎನ್.ಎಸ್. ಮಲ್ಲಯ್ಯ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿದ್ದರು.

