ಸುದ್ದಿಒನ್, ಚಿತ್ರದುರ್ಗ, ಜನವರಿ. 02 : ಇ-ಸ್ವತ್ತು ಮಾಡಿಸಿಕೊಡಲು 5 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರಸಭೆ ಸದಸ್ಯ ಮತ್ತು ಕ್ಲರ್ಕ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಿರಿಯೂರು ನಗರಸಭೆ ಪಕ್ಷೇತರ ಸದಸ್ಯ ಡಿ.ಸಣ್ಣಪ್ಪ ಮತ್ತು ನಗರಸಭೆ (ಎಸ್ ಡಿಸಿ) ಕ್ಲರ್ಕ್ ರಮೇಶ್ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಅವರಿಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ನಗರದ ಪಿ.ನಟರಾಜು ಅವರ ಮನೆಯ ಇ-ಸ್ವತ್ತು ಮಾಡಿಕೊಡಲು 5 ಸಾವಿರ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳವಾರ ಬೆಳಿಗ್ಗೆ ಲಂಚ ಸ್ವೀಕರಿಸುವಾಗ ಇಬ್ಬರನ್ನೂ ಹಿರಿಯೂರು ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.