ಸುದ್ದಿಒನ್, ಚಿತ್ರದುರ್ಗ, ಜನವರಿ. 06 : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ 9 ವರ್ಷಗಳ ನಂತರ ಇಂದಿನಿಂದ (ಜನವರಿ. 06 ರಿಂದ 09 ರವರೆಗೆ) ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಲಿದೆ.
ಈಚಲು ಮರದ ಚಳುವಳಿ ಖ್ಯಾತಿಯ ತುರುವನೂರು ಗ್ರಾಮ ಗಾಂಧೀಜಿಯನ್ನೇ ದೇವರೆಂದು ಪೂಜಿಸುವ ದೇಶಭಕ್ತರ ಊರು, ಸ್ವಾತಂತ್ರ್ಯ ಹೋರಾಟಗಾರರ ತವರೂರು. ಸ್ವತಂತ್ರ ಚಳವಳಿ ವೇಳೆ ಗ್ರಾಮಕ್ಕೆ ಗಾಂಧೀಜಿ ಆಪ್ತ ಕಾರ್ಯದರ್ಶಿ ಭೇಟಿ ನೀಡಿದ್ದರೆಂಬುದು ಗ್ರಾಮದ ಜನರ ಪಾಲಿಗೆ ಹೆಮ್ಮೆ..!

ಈ ಕಾರಣಕ್ಕೆ ದೇಶವು ಆಂಗ್ಲರ ಕಪಿಮುಷ್ಠಿಯಿಂದ ಮುಕ್ತಿ ಪಡೆಯುತ್ತಿದ್ದಂತೆ ಗ್ರಾಮದ
ಮಧ್ಯಭಾಗದಲ್ಲಿರುವ ಭತೇರಿ ಮೇಲೆ ಗಾಂಧಿ ಪ್ರತಿಮೆ ಪ್ರತಿಷ್ಠಾಪಿಸಿ, ಗುಡಿ ನಿರ್ಮಿಸಿ
ಅಂದಿನಿಂದಲೂ ಪೂಜಾ ಕಾರ್ಯ ನಡೆಸಿಕೊಂಡು ಬರುತ್ತಿರುವ ದೇಶಭಕ್ತರ ಗ್ರಾಮವೆಂಬ
ಗೌರವಕ್ಕೆ ಪಾತ್ರವಾಗಿದೆ. ಗಾಂಧೀಜಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನಿಟ್ಟ ಅಹಿಂಸಾವಾದಿಯ ಶಿಖರ. ಮತ್ತೊಬ್ಬರ
ಆಹಾರ, ಜೀವನಕ್ರಮ ಗೌರವಿಸುವ ಮಹಾತ್ಮ. ಅವರ ಈ ಆಶಯಕ್ಕೆ ಬಲ ತಂದುಕೊಡುವ ರೀತಿ
ತುರುವನೂರು ಗ್ರಾಮ ಸಾಕ್ಷಿಕರಿಸುತ್ತದೆ. ಜಗನ್ಮಾತೆ ಮಾರಿಕಾಂಬದೇವಿ ದೇಗುಲದ
ಪಕ್ಕದಲ್ಲಿಯೇ ಮಹಾತ್ಮನ ದೇವಸ್ಥಾನ ನಿರ್ಮಿಸಿರುವುದು ವಿಶೇಷ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿಗೆ, ವಿಶೇಷ ಸಂದರ್ಭದಲ್ಲಿ ಗಾಂಧೀಜಿಗೆ ಅಕ್ಕಪಕ್ಕದಲ್ಲಿಯೇ ಪೂಜೆ ಸಲ್ಲುವುದು ಗ್ರಾಮದ ವೈಶಿಷ್ಟ್ಯ. ಅದರಲ್ಲೂ ಐದು
ವರ್ಷಕ್ಕೊಮ್ಮೆ ನಡೆಯುವ ಮಾರಿಕಾರಂಬದೇವಿ ಜಾತ್ರೋತ್ಸವ ನಾಡಿನ ಜನರನ್ನೇ ತನ್ನಡೆಗೆ
ಸೆಳೆಯುತ್ತದೆ. ಈ ವೇಳೆ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಜನರು ದೇವಿ ದರ್ಶನದ
ಜೊತೆಗೆ ಗಾಂಧೀಜಿ ದೇವಸ್ಥಾನ ಕಣ್ಮುಂಬಿಕೊಂಡು ಐತಿಹಾಸಿಕ ಮಾಹಿತಿ ಪಡೆಯುವುದು
ಸಾಮಾನ್ಯ.
ಹತ್ತು ಸಾವಿರ ಜನಸಂಖ್ಯೆಯ ತುರುವನೂರು ಗ್ರಾಮದಲ್ಲಿ ಹಿಂದುಳಿದ, ದಲಿತ ವರ್ಗದವರೇ
ಹೆಚ್ಚು. ಈ ಕಾರಣಕ್ಕೆ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೋತ್ಸವ ಬಾಡೂಟದ ಸವಿಗೆ
ಖ್ಯಾತಿ ಗಳಿಸಿದೆ. 1910 ರಲ್ಲಿ ಸ್ಥಗಿತಗೊಂಡಿದ್ದ ಉತ್ಸವ 80 ವರ್ಷಗಳ ಬಳಿಕ 1990ರಲ್ಲಿ ಮರು ಚಾಲನೆ ಪಡೆದುಕೊಂಡಿತ್ತು. ನಂತರ 2012, 2018ರಲ್ಲಿ ನಡೆದಿದ್ದು, ಎಂಟು ವರ್ಷದ ಬಳಿಕ
ಪ್ರಸ್ತುತ ಜ.6ರ ಮಂಗಳವಾರ ಜಾತ್ರೋತ್ಸವಕ್ಕೆ ಇಡೀ ಊರೇ ಸಿಂಗಾರಗೊಂಡಿದ್ದು, ಪ್ರತಿ
ಮನೆಗಳು ಸುಣ್ಣ-ಬಣ್ಣದಿಂದ ಕಂಗೊಳಿಸುತ್ತಿವೆ. ಜ.9ರ ಶುಕ್ರವಾರದವರೆಗೆ ವಿವಿಧ
ಧಾರ್ಮಿಕ ಕಾರ್ಯಗಳು ನೆರವೇರಲಿವೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು 100 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದು
ಗ್ರಾಮದಲ್ಲಿ ಪಾರ್ಕ್ ಸೇರಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು, ಅದರಲ್ಲೂ
ಜನದಟ್ಟನೆಗೆ ಕಡಿವಾಣ ಹಾಕುವ ರೀತಿ ದ್ವಿಮುಖ ರಸ್ತೆ ಪೂರ್ಣಗೊಂಡಿರುವುದು ಉತ್ಸವದ
ಮೆರುಗನ್ನು ಹೆಚ್ಚಿಸಿದೆ.
ಮಂಗಳವಾರ ಮಾರಿಕಾಂಬ ದೇವಿ ಸಂಗೇನಹಳ್ಳಿ ಕೆರೆಗೆ ತೆರಳಿ ಗಂಗಾಪೂಜೆ, ಬಳಿಕ
ಬೋಗಳೇರಹಟ್ಟಿ, ಅವಳೇನಹಳ್ಳಿಯಲ್ಲಿ ಪೂಜೆ ಸ್ವೀಕರಿಸಿ ಗ್ರಾಮಕ್ಕೆ ಹಿಂತಿರುಗಲಿದ್ದು ಮೂಲ ದೇಗುಲದಲ್ಲಿ ಕೂರಲಿದ್ದು, ವಿಶೇಷ ನೈವೈದ್ಯ,
ಪೂಜೆ ಭಕ್ತರು ಸಲ್ಲಿಸಲಿದ್ದಾರೆ.
ಬುಧವಾರ ಬೆಳಗಿನಜಾವ ತುರುವನೂರು ಗ್ರಾಮದ ಗಡಿಭಾಗದಲ್ಲಿ ನಿರ್ಮಿಸಿರುವ ಚೌಕಿಮನೆಗೆ ದೇವಿಯನ್ನು ಹೊತ್ತುತಂದು ಪ್ರತಿಷ್ಠಾಪಿಸಲಾಗುತ್ತದೆ.
ಪೂಜಾ ಕಾರ್ಯ ಬಳಿಕ ತನ್ನ ದರ್ಶನ ಪಡೆಯಲು ಸಹಸ್ರಾರು ಭಕ್ತರು ಆಗಮಿಸುವುದು ಹಾಗೂ ಕಿರಿದಾದ ಜಾಗದ ಕಾರಣಕ್ಕೆ ದೇವಿ ಸ್ಥಳ ಬದಲಾಯಿಸಲಿದ್ದು, ಗ್ರಾಮದ ಹೊರವಲಯದ ಚೌತಿಕಟ್ಟೆಗೆ ತೆರಳುತ್ತದೆ. ನಾಲ್ಕು ದಿನ ಭಕ್ತರು ಸಲ್ಲಿಸಿದ ತಮ್ಮಿಷ್ಟದ ನೈವೈದ್ಯ, ಪೂಜೆ ಸ್ವೀಕರಿಸಿ
ಶುಕ್ರವಾರವೇ ಮಧುವಣಗಿತ್ತಿಯಂತೆ ಸಿಂಗಾರಗೊಂಡು ಕಲಾತಂಡಗಳೊಂದಿಗೆ ಇಡೀ ಗ್ರಾಮವನ್ನು ಸುತ್ತುವರಿದು ಮೂಲ ದೇವಸ್ಥಾನ ತಲುಪಲಿದೆ. ಈ ಮೂಲಕ ನಾಲ್ಕು ದಿನಗಳ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.
ಒಗ್ಗಟ್ಟು ಗಟ್ಟಿ ಆಗಲಿದೆ: ಜಾತ್ರೋತ್ಸವ ಸಂದರ್ಭ ಹನ್ನೆರಡು ಕೈವಾಡದವರು ಸೇರಿ ಪೂಜಾ ಕಾರ್ಯಗಳನ್ನು ಸೌಹಾರ್ದತೆಯಿಂದ ಕೈಗೊಂಡು ದೇವಿಗೆ ತೃಪ್ತಿ ಆಗುವ ರೀತಿ ನಡೆಸುತ್ತೇವೆ. ಜಾತ್ರೆ ನೆಪದಲ್ಲಿ ಊರಿನ ಜನರಲ್ಲಿ ಒಗ್ಗಟ್ಟು ಮೂಡುತ್ತದೆ. ಅಭಿವೃದ್ಧಿ ಕಾರ್ಯಗಳು ಚುರುಕು ಪಡೆದುಕೊಳ್ಳುತ್ತವೆ ಎನ್ನುತ್ತಾರೆ ಜಾತ್ರೋತ್ಸವ ಸಮಿತಿಯ ಜಿ.ಬಿ.ನಟೇಶಪ್ಪ, ಬಿ.ನಾಗರಾಜಪ್ಪ, ವೈ.ಚಂದ್ರಪ್ಪ, ಬಿ.ರಾಮಯ್ಯ, ಖಾಕಿ ಹನುಮಂತರೆಡ್ಡಿ, ಆನಂದಚಾರ್ ಪೂಜಾರಿ, ಹೆಚ್.ವಿಶ್ವನಾಥ್, ಸಿದ್ದೇಶ್ವರಪ್ಪ, ತಿಪ್ಪೇಸ್ವಾಮಿ, ರಾಮಕೃಷ್ಣರೆಡ್ಡಿ, ಹೆಚ್.ಶಿವಣ್ಣ ಇತರರು.
ಮಾರಿಕಾಂಬ ದೇವಿ ನಮ್ಮನ್ನು ರಕ್ಷಿಸುವ ಜಗನ್ಮಾತೆ. ಅನಾದಿಕಾಲದಿಂದಲೂ
ಪೂರ್ವಿಕರು ನಡೆಸಿಕೊಂಡು ಬಂದ ರೀತಿಯೇ ಪೂಜಾ ಕಾರ್ಯಗಳು ನಡೆಯಲಿವೆ. ಐದು
ವರ್ಷಕ್ಕೊಮ್ಮೆ ನಡೆಸಬೇಕೆಂಬ ಪದ್ಧತಿ ಇದ್ದರೂ ಮಳೆ-ಬೆಳೆ ಕೈಕೊಟ್ಟಾಗ ಮುಂದೂಡುತ್ತೇವೆ
ಎನ್ನುತ್ತಾರೆ ಜಾತ್ರೆ ಸಮಿತಿ ಅಧ್ಯಕ್ಷರಾದ ಜಿ.ಬಿ.ನಟೇಶ.

ಮದುವಣಗಿತ್ತಿಯಂತೆ ಸಿಂಗಾರ : 9 ವರ್ಷಗಳ ನಂತರ ನಡೆಯುತ್ತಿರುವ ಜಾತ್ರೆಗಾಗಿ ಊರಿಗೆ ಊರೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು
ಕಣ್ಮನ ಸೆಳೆಯುತ್ತಿದೆ. ಪ್ರವಾಸಿ ಮಂದಿರದಿಂದ ಆರಂಭವಾಗುವ ದ್ವಿಮುಖ ರಸ್ತೆಯ ವಿದ್ಯುತ್ ದೀಪಗಳು ನೂತನವಾಗಿ ನಿರ್ಮಾಣವಾಗಿರುವ ಪದವಿ ಕಾಲೇಜಿನವರೆಗೂ, ಅಷ್ಟೇ ಅಲ್ಲದೇ ಊರಿನ ಪ್ರತಿ ಬೀದಿಯಲ್ಲಿ ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿದೆ.














