ಸುದ್ದಿಒನ್, ಚಿತ್ರದುರ್ಗ : ಮಂಗಳಮುಖಿಯರಲ್ಲಿ ಕಷ್ಟ ಪಟ್ಟು ಸ್ವಾವಲಂಬಿ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿ ಎನಿಸುವಂಥ ಮಂಗಳಮುಖಿಯರು ಸಾಕಷ್ಟು ಮಂದಿ ಇದ್ದಾರೆ. ಅಂತವರಲ್ಲಿ ತಾಲ್ಲೂಕಿನ ಸಿರಿಗೆರೆ ಸಮೀಪದ ಕೊಳಹಾಳ್ ಬಳಿ ವಾಸವಿರುವ ಸಾಮಾಜಿಕ ಕಾರ್ಯಕರ್ತೆ ಮಂಗಳಮುಖಿ ಅರುಂಧತಿ ಕೂಡಾ ಒಬ್ಬರು. ಅವರು ದೂರದ ಮಂಡ್ಯ ಜಿಲ್ಲೆಯಿಂದ ಬಂದು ಕೊಳಹಾಳ್ ಗ್ರಾಮದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇಲ್ಲಿ ಶೆಡ್ ನಿರ್ಮಿಸಿಕೊಂಡು ಕುರಿ ಮತ್ತು ಮೇಕೆಗಳನ್ನು ಸಾಕಿ ಸ್ವಾವಲಂಬಿ ಜೀವನ ನಡೆಸುವ ಮೂಲಕ ಸುತ್ತಮುತ್ತಲಿನ ಪ್ರದೇಶದಲ್ಲಿ ಇವರು ತುಂಬಾ ಹೆಸರುವಾಸಿಯಾಗಿದ್ದಾರೆ.
ಅವರು ಶೆಡ್‌ವೊಂದರಲ್ಲಿ 5 ಕುರಿ ಮತ್ತು 43 ಮೇಕೆಗಳನ್ನು ಸಾಕಿ ಪ್ರಸ್ತುತ ಸಮಾಜಕ್ಕೆ ಮಾದರಿ ಎನಿಸಿಕೊಂಡಿದ್ದರು. ಆದರೆ ಯಾರೋ ಖದೀಮರು ರಾತ್ರೋರಾತ್ರಿ ಅವುಗಳನ್ನು ಕದ್ದೊಯ್ದಿದ್ದಾರೆ. ಕಳ್ಳತನವಾಗಿರುವ ಕುರಿ ಮತ್ತು ಮೇಕೆಗಳ ಬೆಲೆ ಅಂದಾಜು 8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬುಧವಾರ ಎಂದಿನಂತೆ ಕುರಿ ಮತ್ತು ಮೇಕೆಗಳನ್ನು ಮೇಯಿಸಿ ಅವುಗಳನ್ನು ಶೆಡ್‌ನಲ್ಲಿ ಕೂಡಿ, ಮೇವು ಹಾಕಿ ಸಂಘಟನೆಯ ಕೆಲಸದಲ್ಲಿ ಭಾಗಿಯಾಗಲು, ಅರುಂಧತಿಯವರು ಚಿಕ್ಕಮಗಳೂರಿಗೆ ಹೋಗಿದ್ದರು. ಜೊತೆಗಿದ್ದವರು ಎಂದಿನಂತೆ ಗುರುವಾರ ಬೆಳಿಗ್ಗೆ ಶೆಡ್‌ನತ್ತ ಬಂದಿದ್ದಾರೆ. ಅದರ ಬೀಗ ಒಡೆದು, ಸರಪಳಿ ಬಿಚ್ಚಿರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಅರುಂಧತಿಯವರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ಪ್ರೀತಿಯಿಂದ ಸಾಕಿದ್ದ ಪ್ರಾಣಿಗಳು, ಮುಂದಿನ ಜೀವನಕ್ಕೆ ಅವುಗಳೇ ಆಧಾರವಾಗಿದ್ದ ಪ್ರಾಣಿಗಳು ಇಲ್ಲ ಎಂದು ಗೊತ್ತಾಗಿ ಕಂಗಾಲಾಗಿದ್ದಾರೆ.
ವಿಷಯ ತಿಳಿದು ಗುರುವಾರ ಮಧ್ಯಾನ್ಹದ ವೇಳೆಗೆ ಘಟನಾ ಸ್ಥಳಕ್ಕೆ ವಾಪಸು ಬಂದಿದ್ದಾರೆ. ಮತ್ತೊಮ್ಮೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೂ ಪ್ರಯೋಜವಾಗಿಲ್ಲ. ಕಡೆಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಘಟನೆಯಿಂದ ಸ್ವಾವಲಂಬನೆಯಿಂದ ಬದುಕು ಸಾಗಿಸಿತ್ತಿದ್ದ ಮಂಗಳಮುಖಿ ಅರುಂಧತಿಯವರ ಕನಸಿಗೆ ಕೊಳ್ಳಿಯಿಟ್ಟಂತಾಗಿದೆ.
ಇದೇ ಅರುಂಧತಿಯವರು ಕೊವಿಡ್ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಜನರಿಗೆ ಶುದ್ಧ ಕುಡಿಯುವ ನೀರು ವಿತರಣೆ ವ್ಯವಸ್ಥೆ ಮಾಡಿ ಹೆಸರಾಗಿದ್ದರು. ಇವರ ಸೇವೆಯನ್ನು ಪರಿಗಣಿಸಿ ಚಿತ್ರದುರ್ಗ ಜಿಲ್ಲಾಡಳಿತ ಕಳೆದ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.