ಚಿತ್ರದುರ್ಗ : ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಎಂ.ಜಯಣ್ಣ ಅಧಿಕಾರ ಸ್ವೀಕಾರ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

* ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಎಂ.ಜಯಣ್ಣ ಅಧಿಕಾರ ಸ್ವೀಕಾರ.

* ಪಕ್ಷವನ್ನು ಸಂಘಟಿಸುವುದೇ ನನ್ನ ಗುರಿ.

* ವರಿಷ್ಠರು ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.

ಚಿತ್ರದುರ್ಗ, (ಏ.23) : ಪಕ್ಷದ ವರಿಷ್ಠರು ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳವನ್ನು ಸಂಘಟಿಸುವುದಾಗಿ ನೂತನ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಭಾನುವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಜೆಡಿಎಸ್. ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಜಿಲ್ಲೆಯಾದ್ಯಂತ ಸಂಚರಿಸಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಪಕ್ಷವನ್ನು ಸಂಘಟಿಸುವುದೇ ನನ್ನ ಗುರಿ. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ನಾಲ್ಕು ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ. ಪಕ್ಷದಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಎಲ್ಲರನ್ನು ವಿಶ್ವಾಸ ಗಳಿಸಿ ಪಕ್ಷವನ್ನು ಬಲಪಡಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಎಂ.ಜಯಣ್ಣ ಭರವಸೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ನೂತನ ಅಧ್ಯಕ್ಷರಿಗೆ ಪಕ್ಷದ ಭಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿ ಮಾತನಾಡುತ್ತ ಕೂದಲೆಳೆಯಷ್ಟು ನೋವು ಮಾಡಿಕೊಳ್ಳದೆ ಜೆಡಿಎಸ್.ಜಿಲ್ಲಾಧ್ಯಕ್ಷ ಸ್ಥಾನವನ್ನು ಎಂ.ಜಯಣ್ಣನವರಿಗೆ ವಹಿಸಿಕೊಟ್ಟಿದ್ದೇನೆ. ಪಕ್ಷದ ವರಿಷ್ಠರ್ಯಾರು ನನ್ನ ಮೇಲೆ ಒತ್ತಡ ಹಾಕಿಲ್ಲ.

22 ವರ್ಷಗಳ ಕಾಲ ಪಕ್ಷದ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ತೃಪ್ತಿಯಿರುವುದರಿಂದ ಸ್ವಯಂ ಪ್ರೇರಿತನಾಗಿ ಅಧಿಕಾರ ಬಿಟ್ಟುಕೊಟ್ಟಿದ್ದೇನೆ. ಇನ್ನು ಮುಂದೆಯೂ ನೂತನ ಅಧ್ಯಕ್ಷರಿಗೆ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುವುದಾಗಿ ತಿಳಿಸಿದರು.

ಡಿ.ಮಂಜುನಾಥ್, ಏಕಾಂತಯ್ಯ, ತಿಪ್ಪೇಸ್ವಾಮಿ, ಬಿ.ಟಿ.ಚನ್ನಬಸಪ್ಪ, ಎಸ್.ಕೆ.ಬಸವರಾಜನ್, ಮಲ್ಲಪ್ಪ ಇನ್ನು ಅನೇಕ ಘಟಾನುಘಟಿ ನಾಯಕರುಗಳ ನಡುವೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಗರದ ಹೃದಯ ಭಾಗದಲ್ಲಿ ಕೋಟ್ಯಾಂತರ ರೂ.ಬೆಲೆ ಬಾಳುವ ಪಕ್ಷದ ಆಸ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಬಹಳಷ್ಠು ಶ್ರಮ ಪಟ್ಟಿದ್ದೇನೆ. ಇದಕ್ಕೆ ಬಿ.ಕಾಂತರಾಜ್ ಇನ್ನು ಅನೇಕರ ಸಹಕಾರ ಇಲ್ಲದಿದ್ದರೆ ಆಗುತ್ತಿರಲಿಲ್ಲ ಎಂದು ಸ್ಮರಿಸಿಕೊಂಡರು.

ಇಲ್ಲಿಯವರೆಗೂ ನನಗೆ ಸಹಕಾರ ನೀಡಿದಂತೆ ನೂತನ ಅಧ್ಯಕ್ಷ ಎಂ.ಜಯಣ್ಣನವರಿಗೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಸಹಕರಿಸಬೇಕು. ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಂದಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸೋಣ ಎಂದು ಹೇಳಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್. ಅಭ್ಯರ್ಥಿ ಜಿ.ರಘು ಆಚಾರ್ ಮಾತನಾಡಿ ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ. ಕಾರ್ಯಕರ್ತರಿಲ್ಲದಿದ್ದರೆ ಪಕ್ಷವಿಲ್ಲ. ನಾನು ಕೂಡ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಗೆ ದುಡಿಯುತ್ತೇನೆ. ಪಕ್ಷದ ವರಿಷ್ಟರು ನನಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಮೇ.10 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ವಿನಂತಿಸಿದರು.
ಜೆಡಿಎಸ್.ಜಿಲ್ಲಾಧ್ಯಕ್ಷರಾಗಿ ಇಲ್ಲಿಯವರೆಗೂ ಪಕ್ಷ ಸಂಘಟನೆಗೆ ಒತ್ತು ನೀಡಿದ ಡಿ.ಯಶೋಧರ ಸ್ವ-ಇಚ್ಚೆಯಿಂದ ಪಕ್ಷದ ಅಧ್ಯಕ್ಷ ಸ್ಥಾನವನ್ನು ಎಂ.ಜಯಣ್ಣನವರಿಗೆ ವಹಿಸಿದ್ದಾರೆ. ಮುಂದೆ ಅವರಿಗೂ ಎಲ್ಲಾ ರೀತಿಯ ಸಹಕಾರವನ್ನು ಕಾರ್ಯಕರ್ತರು ಮುಖಂಡರುಗಳು ನೀಡಬೇಕೆಂದು ಜಿ.ರಘು ಆಚಾರ್ ಮನವಿ ಮಾಡಿದರು.

ಜೆಡಿಎಸ್. ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್, ರಾಜ್ಯ ಕಾರ್ಯದರ್ಶಿಗಳಾದ ವೀರಣ್ಣ, ಶಿವಶಂಕರ್, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತ, ಜಿಲ್ಲಾ ಕಾರ್ಯಾಧ್ಯಕ್ಷ ಜೆ.ಬಿ.ಶೇಖರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ತಿಮ್ಮಣ್ಣ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಪರಮೇಶ್ವರ್, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್‍ಜೋಗಿ, ಶಿವಪ್ರಸಾದ್‍ಗೌಡ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಹನುಮಂತರಾಯ, ಅಬ್ಬು, ವೆಂಕಟೇಶ್, ರವಿಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಲಕ್ಷ್ಮಿಕಾಂತ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *