ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವಂಬರ್.08 : ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹೊರ ಜಿಲ್ಲೆಯವರನ್ನು ಇಲ್ಲಿಗೆ ಕರೆ ತಂದು ಟಿಕೆಟ್ ಕೊಟ್ಟು ಗೆಲ್ಲಿಸುವ ಬದಲು ಸ್ಥಳೀಯ ಮುಖಂಡ ಕಾಂಗ್ರೆಸ್‍ನ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‍ಗೆ ಬುದ್ದಿ ಕಲಿಸಬೇಕಾಗುತ್ತದೆಂದು ಮಾದಿನ ಜನಾಂಗ ಹಾಗೂ ವಿವಿಧ ದಲಿತಪರ ಸಂಘಟನೆಗಳು ಪ್ರವಾಸಿ ಮಂದಿರದಲ್ಲಿ ಬುಧವಾರ ಸಭೆ ನಡೆಸಿ ತೀರ್ಮಾನ ಕೈಗೊಂಡರು.
ನಗರಸಭೆ ಮಾಜಿ ಉಪಾಧ್ಯಕ್ಷ ದಲಿತ ಮುಖಂಡ ದುರುಗೇಶಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಎಲ್ಲಾ ರಾಷ್ಟ್ರೀಯ ಪಕ್ಷಗಳು ಜಿಲ್ಲೆಯ ಮತದಾರರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡು ಹೊರಗಿನ ಹಣವಂತರನ್ನು ಹುಡುಕಿ ತಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುತ್ತಿವೆ. ಇನ್ನಾದರೂ ಮಾದಿಗರು ಎಚ್ಚೆತ್ತುಕೊಂಡು ಕಾಂಗ್ರೆಸ್ ನಾಯಕರುಗಳಿಗೆ ಬುದ್ದಿ ಕಲಿಸದಿದ್ದರೆ ಸ್ಥಳೀಯರು ಲೋಕಸಭೆ ಆಯ್ಕೆಯಾಗುವುದು ಕನಸಿನ ಮಾತಾಗುತ್ತದೆ ಎಂದು ಜಾಗೃತಿಗೊಳಿಸಿದರು.
ಪ್ರೊ.ಬಿ.ಕೃಷ್ಣಪ್ಪನವರ ಮಾರ್ಗದರ್ಶನ, ಅವರ ಹೆಜ್ಜೆ ಗುರುತಿನಲ್ಲಿ ಮಾದಿಗರು ಕೆಲಸ ಮಾಡಬೇಕಾಗಿದೆ. ಜನಾಂಗದ ವಿಚಾರ ಬಂದಾಗ ದಲಿತರೆಲ್ಲಾ ಒಂದಾಗಿ ರಾಷ್ಟ್ರೀಯ ಪಕ್ಷಗಳಿಗೆ ಶಕ್ತಿ ಪ್ರದರ್ಶಿಸಬೇಕು. ಸ್ಥಳೀಯ ಮುಖಂಡ ಡಾ.ಬಿ.ತಿಪ್ಪೇಸ್ವಾಮಿಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಲು ನಾಯಕರುಗಳು ಟಿಕೆಟ್ ನೀಡದಿದ್ದರೆ ಕಾಂಗ್ರೆಸ್‍ಗೆ ಬುದ್ದಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನಲ್ಲಿ ಎರಡರಿಂದ ಮೂರು ಸಾವಿರ ಜನ ಗುಂಪುಕಟ್ಟಿಕೊಂಡು ಡಾ.ಬಿ.ತಿಪ್ಪೇಸ್ವಾಮಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ದೃಢ ನಿರ್ಧಾರ ಕೈಗೊಳ್ಳುವಂತೆ ಮಾದಿಗ ಜನಾಂಗದವರಲ್ಲಿ ಮನವಿ ಮಾಡಿದರು.
ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಬಿ.ಪ್ರಕಾಶ್‍ಬೀರಾವರ ಮಾತನಾಡಿ ಸ್ಥಳೀಯ ಮುಖಂಡ ಡಾ.ಬಿ.ತಿಪ್ಪೇಸ್ವಾಮಿಯನ್ನು ಕಾಂಗ್ರೆಸ್ ನಾಯಕರುಗಳು ಕಡೆಗಣಿಸುತ್ತಿರುವುದರಿಂದ ಪ್ರತಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೊರ ಜಿಲ್ಲೆಯವರು ಇಲ್ಲಿಗೆ ಬಂದು ಗೆದ್ದು ಸಂಸತ್‍ಗೆ ಹೋಗುತ್ತಿದ್ದಾರೆ. ಹಾಗಾಗಿ ಹೊರಗಿನವರಿಗೆ ಪಕ್ಷ ಮಣೆ ಹಾಕಬಾರದು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತರು ಕಾಂಗ್ರೆಸ್‍ಗೆ ಮತ ನೀಡುತ್ತಾ ಬರುತ್ತಿದ್ದರೂ ಜೀತದಾಳುಗಳಂತೆ ನೋಡುತ್ತಿದೆ. ಈಗಲಾದರು ದಲಿತರು ಎಚ್ಚೆತ್ತುಕೊಂಡು ಡಾ.ಬಿ.ತಿಪ್ಪೇಸ್ವಾಮಿಗೆ ಬೆಂಬಲಿಸಿ ಗೆಲ್ಲಿಸುವ ಮೂಲಕ ಪಾರ್ಲಿಮೆಂಟ್‍ಗೆ ಕಳಿಸಬೇಕೆಂದು ವಿನಂತಿಸಿದರು.
ಮಾದಿಗ ಮುಖಂಡ ಸಿ.ತಿಪ್ಪೇಸ್ವಾಮಿ ಮಾತನಾಡುತ್ತ ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಮತಗಳೆ ನಿರ್ಣಾಯಕ ಎನ್ನುವುದನ್ನು ಕಾಂಗ್ರೆಸ್ ಮರೆತಂತಿದೆ. ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೆಟ್ ಕೊಡಿಸುವ ಕೆಲಸವಾಗಬೇಕಾಗಿರುವುದರಿಂದ ದಲಿತರೆಲ್ಲಾ ಸೇರಿ ಒಗ್ಗಟ್ಟು ಪ್ರದರ್ಶಿಸೋಣ ಎಂದು ಹೇಳಿದರು.
ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಬಿ.ಎನ್.ಚಂದ್ರಪ್ಪ, ಈಗಿನ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಇವರುಗಳಿಂದ ಜಿಲ್ಲೆಯಲ್ಲಿ ಯಾವ ಅಭಿವೃದ್ದಿಯೂ ಆಗಿಲ್ಲ. ಪ್ರತಿ ಚುನಾವಣೆಯಂತೆ ಈ ಬಾರಿಯೂ ಹೊರಗಿನವರು ನಮ್ಮ ಜಿಲ್ಲೆಗೆ ವಲಸೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿ ಮಾದಿಗರಹಟ್ಟಿಗೆ ಬಂದರೆ ಘೇರಾವ್ ಮಾಡುವ ನಿರ್ಧಾರಕ್ಕೆ ಬರೋಣ ಎಂದರು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಕಾರ್ಯದರ್ಶಿ ರಾಮಚಂದ್ರ ಕೆ. ಮಾತನಾಡುತ್ತ ಇಲ್ಲಿಯವರೆಗೂ ಹೊರಗಿನವರು ನಮ್ಮ ಜಿಲ್ಲೆಯನ್ನು ಆಳುತ್ತಿದ್ದಾರೆ. ಮಾದಿಗ ಸಮಾಜ ಒಂದಾದರೆ ಮಾತ್ರ ಕಾಂಗ್ರೆಸ್‍ನಿಂದ ಟಿಕೆಟ್ ತಂದು ಡಾ.ಬಿ.ತಿಪ್ಪೇಸ್ವಾಮಿಯನ್ನು ಗೆಲ್ಲಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಕುಂಚಿಗನಹಾಳ್ ಮಹಲಿಂಗಪ್ಪ, ಮಹಂತೇಶ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್, ಚೌಳೂರು ಪ್ರಕಾಶ್ ಇನ್ನು ಅನೇಕರು ಮಾತನಾಡಿ ಡಾ.ಬಿ.ತಿಪ್ಪೇಸ್ವಾಮಿಗೆ ಬೆಂಬಲಿಸುವುದಾಗಿ ನುಡಿದರು.