ಸುದ್ದಿಒನ್, ಚಿತ್ರದುರ್ಗ, ಮಾರ್ಚ್.15 : ಲೋಕಸಭಾ ಚುನಾವಣಾ ದಿನಾಂಕವನ್ನು ನಾಳೆ ಚುನಾವಣಾ ಆಯೋಗ ಪ್ರಕಟಿಸಲಿದೆ. ಈಗಾಗಲೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿವೆ. ಈ ಬಾರಿ ಬಿಜೆಪಿಯಲ್ಲಿ ಬಾರೀ ಬದಲಾವಣೆಗಳೊಂದಿಗೆ ಹಲವರಿಗೆ ಕೋಕ್ ನೀಡಿ ಹೊಸಬರಿಗೆ ಮಣೆ ಹಾಕಿದೆ.
ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈವರೆಗೂ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಅಭ್ಯರ್ಥಿಯನ್ನು ಘೋಷಿಸದೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಬಹುತೇಕ ಪಿಕ್ಸ್ ಆಗಿದ್ದು, ಆಪ್ತ ಮೂಲೆಗಳಿಂದ ಮಾಹಿತಿ ಹೊರಬಿದ್ದಿದೆ. ಇಂದು ಅಥವಾ ನಾಳೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಎ. ನಾರಾಯಣಸ್ವಾಮಿ ಅವರು ನಾನು ಚುನಾವಣೆಗೆ ಸ್ಪರ್ಧಿಸಲ್ಲ , ಭ್ರಷ್ಟಾಚಾರದ ಈ ವ್ಯವಸ್ಥೆಯಲ್ಲಿ, ರಾಜಕಾರಣದಲ್ಲಿ ರಾಜಕೀಯ ಮಾಡುವುದು ತುಂಬಾ ಕಷ್ಟ ಇದೆ ಎಂದು ರಾಜಕೀಯದಿಂದ ದೂರ ಸರಿಯುವ ಮಾತುಗಳನ್ನಾಡಿದ್ದರು. ಈ ಹಿನ್ನೆಲೆಯಲ್ಲಿ
ಮಾಜಿ ಸಚಿವ ಗೋವಿಂದ ಕಾರಜೋಳ ಅವರನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಹೆಸರು ಕೇಳಿ ಬಂದಿತ್ತು. ಆದರೆ ಗೋವಿಂದ ಕಾರಜೋಳ ಅವರು ನಾನು ಸ್ಪರ್ಧಿಸುವುದಿಲ್ಲ ಎ.ನಾರಾಯಣಸ್ವಾಮಿಯವರೇ ಸ್ಪರ್ಧಿಸಲಿ ಎಂದು ವರಿಷ್ಠರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅದರಂತೆ ಕೇಂದ್ರ ಹಾಲಿ ಸಚಿವ ಎ ನಾರಾಯಣಸ್ವಾಮಿ ಅವರು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಕಳೆದ 2019ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಅವರನ್ನು ಸೋಲಿಸಿದ್ದರು. ಚಿತ್ರದುರ್ಗ ಕ್ಷೇತ್ರದ ಸಂಖ್ಯೆ 147 ಆಗಿದೆ. ಇದು ಪ್ರಸ್ತುತ ಚಿತ್ರದುರ್ಗದ 6 ಮತ್ತು ತುಮಕೂರಿನ 2 ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
2019ರಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಒಟ್ಟು 17,60,633 ಮತದಾರರು ಇದ್ದಾರೆ. 2019ರಲ್ಲಿ ಒಟ್ಟು 12,45,950 ಮತದಾರರು ಇದ್ದರು. 2019ರಲ್ಲಿ ಕ್ಷೇತ್ರದಲ್ಲಿ ಶೇ. 70.77% ರಷ್ಟು ಮತದಾನ ನಡೆದಿತ್ತು.