ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 : ಇತ್ತೀಚಿನ ದಿನಗಳಲ್ಲಿ ಚಿರತೆಗಳು ಸೇರಿದಂತೆ ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಕೆಲವೊಂದು ಕಡೆ ದಾಳಿಗಳನ್ನು ನಡೆಸಿವೆ. ಚಿರತೆ ಕಂಡರೆ ಜನ ಭಯಭೀತಿಗೊಳ್ಳುತ್ತಾರೆ. ಈಗ ಏಳು ಸುತ್ತಿನ ಕಲ್ಲಿನ ಕೋಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ. ಇಂದು ಸಂಜೆ ವೇಳೆಗೆ ಚಿರತೆಯ ಹೆಜ್ಜೆ ಗುರುತನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಸಂಜೆ 5.45 ರ ಸುಮಾರಿಗೆ ಕೋಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ಪ್ರವಾಸಿಗರಿಗೆ ಕೋಟೆನಾಡಿನ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದಾಗ ಚಿರತೆ ಪ್ರತ್ಯಕ್ಷವಾಗಿದೆ. ಕೋಟೆ ಮಾರ್ಗದರ್ಶಿ ಮೊಹಿದ್ದೀನ್ ಖಾನ್ ಬಸವರಾಜ್, ಪರಶುರಾಮ್ ಮತ್ತು ಪ್ರವಾಸಿಗರ ಕಣ್ಣಿಗೆ ಚಿರತೆ ಕಾಣಿಸಿಕೊಂಡಿದೆ. 5.50 ಕ್ಕೆ ಗಂಗಾವತಿಯ ಪ್ರವಾಸಿಗರು ಕೋಟೆ ನೋಡಲು ಬಂದಿದ್ದರು. ಸುಮಾರು 50 ಜನರ ತಂಡ ಬಂದಿತ್ತು. ಅವರೆಲ್ಲರು ಟಿಕೆಟ್ ಪಡೆದು ಕೋಟೆ ನೋಡಲು ಮೇಲೆ ಹತ್ತುತ್ತಿದ್ದರು. ಆಗ ಕೋಟೆಯ 6ನೇ ಸುತ್ತಿನ ಬಾಗಿಲ ಬಳಿ ಈ ಚಿರತೆ ಕಾಣಿಸಿಕೊಂಡಿದೆ. ಅದು ಯಾರ ಭಯವೂ ಇಲ್ಲದೆ, ಹೊಸದಾಗಿ ನಿರ್ಮಾಣವಾಗಿರುವ ಟಾಯ್ಲೆಟ್ ಮೇಲಿನ ಹೆಬ್ಬoಡೆ ಮೇಲೆ ಕೂತಿತ್ತು. ಅಷ್ಟೇ ಅಲ್ಲ ಕೋಟೆ ನೋಡಲು ಬಂದಿದ್ದ ಜನರನ್ನೇ ದಿಟ್ಟಿಸಿ ನೋಡುತ್ತಿತ್ತು. ಅದನ್ನು ಕಂಡ ಪ್ರವಾಸಿಗರು ಗಾಬರಿಯಾಗಿದ್ದಾರೆ. ಬಳಿಕ ಕೋಟೆ ಮೇಲಿಂದ ಓಡಿ ಬಂದ ಜನ ಉಳಿದವರಿಗೂ ಚಿರತೆಯನ್ನು ತೋರಿಸಿದರು. ಜನರನ್ನು ಕಂಡರು ಹೆದರದ ಚಿರತೆ ಸುಮಾರು 1/2 ಘಂಟೆಗಳ ಕಾಲ ಅಲ್ಲೇಯೇ ಕೂತಿತ್ತು. ಬಳಿಕ ಆ ಸ್ಥಳದಿಂದ ಓಡಿ ಹೋಯ್ತು ಎಂದು ಹಿರಿಯ ಪ್ರವಾಸಿ ಮಾರ್ಗದರ್ಶಿ ಬಿ. ಮೊಹಿದ್ದೀನ್ ಖಾನ್ ತಿಳಿಸಿದ್ದಾರೆ.


