ಚಿತ್ರದುರ್ಗ | ತುರುವನೂರು ಸಮೀಪ ಚಿರತೆ ಹಾವಳಿ; ಆತಂಕದಲ್ಲಿ ಗ್ರಾಮಸ್ಥರು

1 Min Read

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 03 : ತಾಲ್ಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯ ತುರುವನೂರು, ಕೂನಬೇವು, ಬಾಗೇನಾಳ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಭೀತಿ ಮೂಡಿಸಿದೆ.

ನಾಯಿ, ಕುರಿ, ಕೋಣದ ಮರಿಯನ್ನು ಚಿರತೆ ತಿಂದು ಹೋಗಿರುವ ಘಟನೆಗಳು ನಡೆದಿವೆ. ಕೂನಬೇವು ಗ್ರಾಮದಲ್ಲಿ ರಾತ್ರಿ ವೇಳೆ ತೋಟಗಳಲ್ಲಿ ನೀರು ಹಾಯಿಸಲು ಹೋದ ರೈತರಿಗೆ ಚಿರತೆ ಎದುರಾದ ನಿದರ್ಶನಗಳೂ ಕಂಡು ಬಂದಿದೆ. ತುರುವನೂರು ಸುತ್ತುಮುತ್ತಲಿನ ಊರುಗಳಲ್ಲಿ ಪ್ರಸ್ತುತ ಸೂರ್ಯಕಾಂತಿ ಹಾಗೂ ಮೆಕ್ಕೆಜೋಳ ಬೆಳೆ ಬೆಳೆದು ನಿಂತಿದ್ದು ಸಾವಿರಾರು ಗಿಳಿಗಳು ತಂಡೋಪತಂಡವಾಗಿ ಬಂದು ಕಾಳುಗಳನ್ನು ತಿನ್ನುತ್ತವೆ. ಇವುಗಳನ್ನು ನಿಯಂತ್ರಿಸಲು ರೈತರು ಬೆಳಗಿನ ಜಾವದಲ್ಲಿಯೇ ತಮ್ಮ ತಮ್ಮ ಹೊಲಗಳಿಗೆ ಹೋಗಿ ಕಾವಲು ಕಾಯುತ್ತಿದ್ದಾರೆ. ಆದರೆ ಚಿರತೆ ಹಾವಳಿಯ ಭೀತಿಯಿಂದ ರೈತರು ಹೊಲಗಳಿಗೆ ಹೋಗುವುದನ್ನು ಕೈ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಬೆಳಗಿನ ಸಮಯದಲ್ಲಿ ವಾಕ್ ಮಾಡುವವರು ಕೂಡಾ ಆತಂಕಕ್ಕೆ ಒಳಗಾಗಿದ್ದು  ಮನೆಯಲ್ಲಿಯೇ ಇರುವಂತಾಗಿದೆ.

ಹೆಜ್ಜೆ ಗುರುತಿನ ಆಧಾರದ ಮೇಲೆ ಮತ್ತು ಕೆಲವು ಸಾಕುಪ್ರಾಣಿಗಳನ್ನು ತಿಂದು ಹೋಗಿರುವುದರಿಂದ ಚಿರತೆಯೇ ಇರಬಹುದೆಂದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಚಿರತೆ ಹಾವಳಿ ತಡೆಗೆ ತಾಲ್ಲೂಕು ಅರಣ್ಯಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ನಾಗಣ್ಣ, ವಿಜಯ್, ತೇಜು, ರಾಘು, ನವೀನ್, ಶಾರದಾ, ಪುಷ್ಪಾ, ಓಂಕಾರಪ್ಪ, ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks