ಚಿತ್ರದುರ್ಗ | ಕನ್ನಡ ಶಿಕ್ಷಕಿ ಕಲಾಂಜಲಿ ಇನ್ನಿಲ್ಲ; ವಿದ್ಯಾರ್ಥಿಗಳು ಕಣ್ಣೀರು

2 Min Read

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್, 18: ಚಿನ್ನೂಲಾದ್ರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಸ್ವೀಟಿ ಕಲಾಂಜಲಿ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಬೆಂಗಳೂರಿನ CSI ಚರ್ಚಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಸ್ವೀಟಿ ಕಲಾಂಜಲಿ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಆಗಿದ್ದರು. ತಮ್ಮ ನೆಚ್ಚಿನ ಶಿಕ್ಷಕಿಯ ಸಾವು ಸುದ್ದಿ ಕೇಳಿ ಬಹಳಷ್ಟು ವಿದ್ಯಾರ್ಥಿಗಳು ಕಣ್ಣೀರು ಸುರಿಸಿದರು. ಹಳೇ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ತಮಗೆ ಹೇಗೆ ಪಾಠ ಕಲಿಸಿದರು, ನಮ್ಮ ಬದುಕನ್ನು ಹೇಗೆ ಉನ್ನತ ಮಟ್ಟಕ್ಕೆ ಕೊಂಡೊಯ್ದರು ಎಂಬ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಸಂತಾಪ, ಶ್ರದ್ಧಾಂಜಲಿ ಸಲ್ಲಿಸಿದರು.

ಡಿ.ಟಿ.ವೆಂಕಟೇಶ್ ಸಂತಾಪ: 1981 – 82 ಸಾಲಿನಲ್ಲಿ ನಾನು ಚಿತ್ರದುರ್ಗದ ಪ್ರತಿಷ್ಟಿತ ಬಡಾವಣೆಯಲ್ಲಿ ಒಂದಾದ ಜೆಸಿಆರ್ ಬಡಾವಣೆಯಲ್ಲಿರುವ ಚಿನ್ನೂಲಾದ್ರಿ ಪ್ರೌಢಶಾಲೆಗೆ 8 ನೇ ತರಗತಿಗೆ ಸೇರ್ಪಡೆಯಾದೆ. ಆ ದಿನಗಳಲ್ಲಿ ನನಗೆ ಕನ್ನಡ ಭಾಷೆಗೆ ಪಾಠ ಮಾಡಲು ಸ್ವೀಟಿ ಕಲಾಂಜಲಿ ಅವರು ಶಿಕ್ಷಕರಾಗಿದ್ದರು. ಉತ್ತಮವಾಗಿ ಪಾಠವನ್ನು ಮಾಡಿ ನನ್ನನ್ನು ಸೇರಿ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದರು.

ಇಂದು ನಾವು ಏನಾದ್ರೂ ಬದುಕು ಕಟ್ಟಿಕೊಂಡಿದ್ದರೇ, ಸ್ಪಷ್ಟವಾಗಿ ಕನ್ನಡ ಭಾಷೆ ಮಾತನಾಡುವುದು, ಬರೆಯುವುದು ಕಲಿತಿದ್ದರೇ ಅದೆಲ್ಲವೂ ಸ್ವೀಟಿ ಕಲಾಂಜಲಿ ಅವರು ಬದ್ಧತೆಯಿಂದ ನಮಗೆ ಕೊಟ್ಟ ಕೊಡುಗೆ. ಅವರ ಬೋಧನೆ ಶೈಲಿ, ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳ ರೀತಿ ಅಕ್ಕರೆಯಿಂದ ನೋಡಿಕೊಳ್ಳುವ, ಮಾತನಾಡಿಸುವ ಪ್ರಸಂಗ ಈಗಲೂ ನೆನಪಾಗುತ್ತದೆ. 1983ರಲ್ಲಿ ಸರ್ಕಾರಿ ಶಿಕ್ಷಕರಾಗಿ ಕೆಲಸ ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ವೀಟಿ ಕಲಾಂಜಲಿ ಅವರು ಬೆಂಗಳೂರಿಗೆ ತಲುಪಿದರು. ಆ ದಿನಗಳಲ್ಲಿ ವಿದ್ಯಾರ್ಥಿಗಳಾದ ನಮಗೆ ಟೀಚರ್ ನಮ್ಮ ಶಾಲೆ ತ್ಯಜಿಸಿದ ವಿಚಾರ ಬಹಳಷ್ಟು ನೋವು ತಂದಿತ್ತು. ಇವರ ಪತಿ ಕಾನ್ವೆಂಟ್‌ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಜಾನ್ ಟೀಚರ್ ಎಂದೇ ಖ್ಯಾತಿ ಗಳಿಸಿದ್ದರು. ಕಳೆದ ವರ್ಷ ಜಾನ್ ಟೀಚರ್ ನಿಧನರಾಗಿದ್ದರು. ಈಗ ನಮ್ಮ ನೆಚ್ಚಿನ ಶಿಕ್ಷಕಿ ಅಗಲಿದ್ದಾರೆ. ಅವರ ನಿಧನ ಕುಟುಂಬ ಮತ್ತು ವಿದ್ಯಾರ್ಥಿ ಸಮೂಹಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಎನ್.ಡಿ ಕುಮಾರ್ ಸೇರಿದಂತೆ ಬಹಳಷ್ಟು ವಿದ್ಯಾರ್ಥಿಗಳು ಸಂತಾಪದಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *