ಚಿತ್ರದುರ್ಗ | ನವೆಂಬರ್ 20 ರಂದು ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಸುಲ್ತಾನ್‍ ಜಯಂತಿ

3 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 11 : ಹಜರತ್ ಟಿಪ್ಪು ಸುಲ್ತಾನ್‍ರವರ 274 ನೇ ಜಯಂತಿ ಹಾಗೂ 69 ನೇ ಕನ್ನಡ ರಾಜ್ಯೋತ್ಸವವನ್ನು ನ.20 ರಂದು ರಂಗಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಿ ಟಿಪ್ಪು ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸೋಣ ಎಂದು ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಹೇಳಿದರು.

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವುದರಿಂದ ನ.11 ರಂದು ಆಚರಿಸಬೇಕಿದ್ದ ಟಿಪ್ಪು ಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನು ನ.20 ಕ್ಕೆ ಆಚರಿಸುವ ಕುರಿತು ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮೈಸೂರು ಹುಲಿ ಟಿಪ್ಪುಸುಲ್ತಾನ್ ಕೇವಲ ಮುಸ್ಲಿಂರಿಗಷ್ಟೆ ಅಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಬೇಕಾದವರು. 850 ಕ್ಕೂ ಹೆಚ್ಚು ದೇವಾಲಯಗಳನ್ನು ಜೀರ್ಣೊದ್ದಾರಗೊಳಿಸಿರುವ ಟಿಪ್ಪು ಶೃಂಗೇರಿ ಶಾರದಾಂಬೆಯ ಪರಮ ಭಕ್ತ. ಗಾಂಧಿ ಸರ್ಕಲ್‍ನಿಂದ ಮೆರವಣಿಗೆ ಮೂಲಕ ರಂಗಮಂದಿರಕ್ಕೆ ತೆರಳಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸೋಣ ಅನುಮತಿ ಕೊಟ್ಟರೆ ಸರಿ. ಇಲ್ಲವಾದರೆ ನೇರವಾಗಿ ರಂಗಮಂದಿರದಲ್ಲಿ ಟಿಪ್ಪುಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸೋಣ. ಇದಕ್ಕೆ ಎಲ್ಲಾ ಜಾತಿ ಧರ್ಮದವರ ಸಹಕಾರ ಬೇಕು ಎಂದು ಕೋರಿದರು.

ಏಳು ವರ್ಷಗಳ ಕಾಲ ರಾಜ್ಯದಲ್ಲಿ ಸುತ್ತಾಡಿ ಮುನ್ನೂರು ರೋಡ್‍ಶೋಗಳನ್ನು ನಡೆಸಿದ್ದೇನೆ. ಟಿಪ್ಪು ಅಭಿವೃದ್ದಿ ಪ್ರಾಧಿಕಾರ, ಸಂಶೋಧನಾ ಕೇಂದ್ರ, ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಕಾರಣಾಂತರಗಳಿಂದ ಯಾವುದೂ ಈಡೇರಿಲ್ಲ. ನಿರಂತರವಾಗಿ ಹೋರಾಡುತ್ತಿದ್ದೇನೆಂದರು.

ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಂ.ಸಿ.ಓ.ಬಾಬು ಮಾತನಾಡಿ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ನೇರವಾಗಿ ರಂಗಮಂದಿರದಲ್ಲಿ ಟಿಪ್ಪು ಜಯಂತಿ ಆಚರಿಸಿ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಎಲ್ಲರಿಗೂ ತಲುಪಿಸೋಣ. ಕೆಲವು ಕೋಮುವಾದಿಗಳು ಟಿಪ್ಪುಸುಲ್ತಾನ್‍ರವರನ್ನು ಏಕವಚನದಲ್ಲಿ ನಿಂದಿಸುವುದು ನಮ್ಮ ಮನಸ್ಸಿಗೆ ನೋವಾಗುತ್ತದೆ. ಹಾಗಾಗಿ ಟಿಪ್ಪುಜಯಂತಿಯಲ್ಲಿ ಮೆರವಣಿಗೆ ಬೇಡವೆಂದು ಸಲಹೆ ನೀಡಿದರು.

ದಲಿತ ಮುಖಂಡ ಮಹಲಿಂಗಪ್ಪ ಕುಂಚಿಗನಾಳ್ ಮಾತನಾಡುತ್ತ ಟಿಪ್ಪುಸುಲ್ತಾನ್‍ರವರನ್ನು ಕೇವಲ ಮುಸ್ಲಿಂ ಜನಾಂಗಕ್ಕೆ ಮೀಸಲಿಡುವುದು ಸರಿಯಲ್ಲ. ಒಬ್ಬೊಬ್ಬ ದಾರ್ಶನಿಕರನ್ನು ಒಂದೊಂದು ಜಾತಿಗೆ ಕಟ್ಟಿ ಹಾಕಿರುವುದು ನೋವಿನ ಸಂಗತಿ. ಹಾಗಾಗಿ ಎಲ್ಲಾ ಜಾತಿ ಧರ್ಮದವರು ಸೇರಿ ಟಿಪ್ಪುಜಯಂತಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹೇಳಿದರು.

ಮತ್ತೊಬ್ಬ ದಲಿತ ಮುಖಂಡ ಕೆ.ರಾಜಣ್ಣ ಮಾತನಾಡಿ ಅನೇಕ ದೇವಾಲಯಗಳು ಟಿಪ್ಪುಸುಲ್ತಾನ್ ಕಾಲದಲ್ಲಿ ಅಭಿವೃದ್ದಿಯಾಗಿದೆ. ಮೈಸೂರು ಸುತ್ತಮುತ್ತಲಿನಲ್ಲಿ ದಲಿತರಿಗೆ ಮೊದಲು ಜಮೀನು ನೀಡಿದ್ದು, ಟಿಪ್ಪುಸುಲ್ತಾನ್ ಎನ್ನುವುದನ್ನು ಯಾರು ಮರೆಯಬಾರದು. ಬ್ರಿಟೀಷರ ವಿರುದ್ದ ತನ್ನ ಮಕ್ಕಳನ್ನು ಒತ್ತೆಯಿಟ್ಟು ಹೋರಾಡಿ ಮಡಿದ ಟಿಪ್ಪು ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದವರು ಮತಾಂಧನೆಂದು ಅಪ ಪ್ರಚಾರ ಮಾಡುತ್ತಿರುವುದಕ್ಕೆ ಯಾರು ಕಿವಿಗೊಡಬಾರದೆಂದು ಮನವಿ ಮಾಡಿದರು.

ಎ.ಸಾಧಿಕ್‍ವುಲ್ಲಾ ಮಾತನಾಡುತ್ತ ಮೊದಲಿನಿಂದಲೂ ಟಿಪ್ಪುಜಯಂತಿಗೆ ನಮ್ಮ ಕುಟುಂಬ ಸಹಕಾರ ನೀಡುತ್ತ ಬರುತ್ತಿದೆ. ಯಾರು ಏನು ಹೇಳುತ್ತಾರೆನ್ನುವುದು ಮುಖ್ಯವಲ್ಲ. ಟಿಪ್ಪು ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ. ಇದಕ್ಕೆ ನಮ್ಮ ಬೆಂಬಲವಿರುತ್ತದೆ ಎಂದು ನುಡಿದರು.

ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ದಲಿತರು, ಮುಸಲ್ಮಾನರು ಒಂದಾಗಿ ಟಿಪ್ಪುಸುಲ್ತಾನ್ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವವರು ಸಮಾಜದಲ್ಲಿ ಅಶಾಂತಿ ಮೂಡಿಸಲು ಹೊರಟಿದ್ದಾರೆ. ಕಳೆದ ಹದಿನೇಳು ವರ್ಷಗಳಿಂದಲೂ ಚಿತ್ರದುರ್ಗದಲ್ಲಿ ಟಿಪ್ಪುಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಎಲ್ಲಿಯೂ ಗಲಾಟೆಗೆ ಅವಕಾಶವಿಲ್ಲ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಶಬ್ಬೀರ್‍ಭಾಷ, ಎ.ಜಾಕೀರ್‍ಹುಸೇನ್, ಅಕ್ಬರ್, ಮೆಹಬೂಬ್, ಹನೀಫ್, ಆಫೀಜ್ ಫೈಲ್ವಾನ್, ಕಣಿವೆ ಮಾರಮ್ಮ ಯುವಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಸೈಯದ್ ಇಸ್ಮಾಯಿಲ್, ಮನ್ಸೂರ್ ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *