ಚಿತ್ರದುರ್ಗ : ಚಿತ್ರದುರ್ಗ ಹೊರವಲಯದ ಉಪಾಧ್ಯ ಹೋಟೆಲ್ ಪಕ್ಕದಲ್ಲಿರುವ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತರೊಂದಿಗೆ ಶ್ರೀ ಕಣಿವೆ ಆಂಜನೇಯ ಸ್ವಾಮಿ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ 27 ನೇ ವರ್ಷದ ಕಾರ್ತಿಕ ಮಹೋತ್ಸವ ನಡೆಯಿತು.
ಶ್ರೀ ಕಣಿವೆ ಆಂಜನೇಯಸ್ವಾಮಿಗೆ ಬೆಳಿಗ್ಗೆ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ವಿವಿಧ ಹೂ ಹಣ್ಣುಗಳ ಮೂಲಕ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ, ಆಶೀರ್ವಾದ ಪಡೆದು ಸಾಗುತ್ತಿದ್ದರು. ಮಹಾಮಂಗಳಾರತಿ ಮತ್ತು ಸೀತಾ ರಾಮರ ಪಲ್ಲಕ್ಕಿ ದಾರಿ ಉದ್ದಕ್ಕೂ ದೀಪಗಳ ಹಚ್ಚಿದ್ದರು. ಬೆಳಗ್ಗೆಯಿಂದ ಭಜನೆ ಸಹ ನಡೆಯಿತು.
ಭಕ್ತರಿಗೆ ಪ್ರಸಾದ ವಿನಿಯೋಗ
ಆಂಜನೇಯ ಸ್ವಾಮಿ ಕಾರ್ತಿಕ ಮಹೋತ್ಸವಕ್ಕೆ ಬೆಳಗ್ಗೆ 9 ರಿಂದ ಲಾಡು, ಪಾಯಿಸ, ಪಲ್ಯ, ಅನ್ನ ಸಂಬಾರು ಪ್ರಸಾದ ನೀಡಿದರು. ಜಾತ್ರೆಯಂತೆ ಹರಿದು ಬಂದ ಭಕ್ತರಿಗೆ ಸಾಲಿನಲ್ಲಿ ಪ್ರಸಾದ ವಿತರಿಸಿದರು. ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಕಾರ್ತಿಕ ಮಹೋತ್ಸವಕ್ಕೆ ಆಗಮಿಸಿದ್ದರು.