ಸುದ್ದಿಒನ್, ಚಿತ್ರದುರ್ಗ, ಸೆ. 04 : ರಾಜ್ಯ ವಕ್ಫ್ ಬೋರ್ಡ್ ನ ನೂತನ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಜಿಲ್ಲೆಯವರೇ ಆದ ಕೆ. ಅನ್ವರ್ ಬಾಷ ಅವರು ನಿಯೋಜಿತಗೊಂಡಿದ್ದಾರೆ. ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು.
ಸೋಮವಾರ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅನ್ವರ್ ಬಾಷ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅನ್ವರ್ ಬಾಷ, ವೃತ್ತಿಯಲ್ಲಿ ಗುತ್ತಿಗೆದಾರರು. ನಗರದ ಪ್ರತಿಷ್ಠಿತ ವೆಸ್ಟ್ರನ್ ಹಿಲ್ಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. 2020ರಲ್ಲಿ ವಕ್ಫ್ ಬೋರ್ಡ್‍ಗೆ ನಡೆದ ಚುನಾವಣೆಯಲ್ಲಿ ಮೊದಲ ಬಾರಿ ಚುನಾಯಿತರಾಗಿದ್ದರು. ಮೂರು ಬಾರಿ ಚಿತ್ರದುರ್ಗ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಮಾನ್ಯ ಹಜ್ ಸಚಿವ ಜನಾಬ್ ರಹೀಂ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜನಾಬ್ ನಸೀರ್ ಅಹಮದ್ ಅವರೊಂದಿಗೆ ಇಂದು, ನೂತನವಾಗಿ ನಿಯುಕ್ತಿಗೊಂಡಿರುವ ಮಾನ್ಯ ವಕ್ಫ್ ಸಮಿತಿ ಅಧ್ಯಕ್ಷರಾದ ಜನಾಬ್ ಅನ್ವರ್ ಭಾಷಾ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಸನ್ಮಾನಿಸಿದೆ.@RahimKhan_MLA @INCKarnataka pic.twitter.com/ghd3xIwkB9
— B Z Zameer Ahmed Khan (@BZZameerAhmedK) September 4, 2023
ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಅನ್ವರ್ ಬಾಷ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ರಾಜ್ಯಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಸೈಯದ್ ನಾಸಿರ್ ಹುಸೇನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ತನ್ವೀರ್ ಸೇಠ್, ಎನ್.ಎ.ಹಾರಿಸ್, ರಿಝ್ವಾನ್ ಅರ್ಶದ್ ಸೇರಿದಂತೆ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ.