ಚಿತ್ರದುರ್ಗ : ಜಿಲ್ಲೆಯ ಇಬ್ಬರು ಹಿರಿಯ ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

2 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 01: ಕರ್ನಾಟಕ ಜಾನಪದ ಅಕಾಡೆಮಿಯು 2024ನೇ ಸಾಲಿನಲ್ಲಿ ರಾಜ್ಯದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಹಾಗೂ ಇಬ್ಬರು ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಬಾರಿ ಜಿಲ್ಲೆಯ ಇಬ್ಬರು ಹಿರಿಯ ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ.

ತಾಲ್ಲೂಕಿನ ತುರುವನೂರು ಮೂಲದ ಡಾ.ಮೈಲಳ್ಳಿ ರೇವಣ್ಣನವರಿಗೆ ಜಾನಪದ ತಜ್ಞ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅವರು ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ. ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಜೀ.ಶಂ.ಪರಮಶಿವಯ್ಯ ಜಾನಪದ ತಜ್ಙ ಪ್ರಶಸ್ತಿಯನ್ನು 2024 ನೇ ಸಾಲಿಗಾಗಿ ನೀಡಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದು, ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲವನ್ನು ಒಳಗೊಂಡಿರುತ್ತದೆ.

ಮೊಳಕಾಲ್ಮೂರು ತಾಲ್ಲೂಕಿನ ಚಕ್ಕಂತಿ ಗ್ರಾಮದ ಎ.ಶ್ರೀನಿವಾಸ್ ಅವರಿಗೆ ವಾರ್ಷಿಕ ಗೌರವ ನೀಡಿ ಗೌರವಿಸಿದೆ. ಈ ಪ್ರಶಸ್ತಿಯು 25 ಸಾವಿರ ರೂ. ನಗದು, ಸ್ಮರಣಿಕೆ, ಶಾಲು. ಹಾರ, ಫಲತಾಂಬೂಲ ಒಳಗೊಂಡಿರುತ್ತದೆ ಎಂದು ಅಕಾಡೆಮಿಯ ಅಧ್ಯಕ್ಷ ಗೊಲ್ಲಳ್ಳಿ ಶಿವಪ್ರಸಾದ್ ತಿಳಿಸಿದ್ದಾರೆ.

ರಾಜ್ಯದ ಇತರೆ ಜಿಲ್ಲೆಯವರಿಗೆ ಒಲಿದ ಅಕಾಡೆಮಿ ಪ್ರಶಸ್ತಿಯ ಸಂಪೂರ್ಣ ಮಾಹಿತಿ :

  • ವಾರ್ಷಿಕ ಪ್ರಶಸ್ತಿಗೆ ಬೆಂಗಳೂರು ನಗರ ಜಿಲ್ಲೆಯ ಜಾನಪದ ಗಾಯಕ ಡಾ. ಜೋಗಿಲ ಸಿದ್ದರಾಜು,
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತತ್ವಪದ ಮತ್ತು ಗೀಗೀ ಪದ ಕಲಾವಿದ ಸಿದ್ದಯ್ಯ ಸಿ.ಎಚ್.,
  • ರಾಮನಗರ ಜಿಲ್ಲೆಯ ಡೊಳ್ಳು ಕುಣಿತ ಕಲಾವಿದ ಎಂ.ಮಹೇಶ್,
  • ಕೋಲಾರ ಜಿಲ್ಲೆಯ ಕೋಲಾಟ ಕಲಾವಿದೆ ಸುನಂದಮ್ಮ,
  • ಚಿಕ್ಕಬಳ್ಳಾಪುರ ಜಿಲ್ಲೆಯ ಅರೆವಾದ್ಯ, ತಮಟೆ ಕಲಾವಿದ ವೆಂಕಟರಮಣಪ್ಪ,
  • ತುಮಕೂರು ಜಿಲ್ಲೆಯ ಕಿನ್ನರಿ ಜೋಗಿ ಕಲಾವಿದ ಸಿದ್ದಪ್ಪ,
  • ದಾವಣಗೆರೆ ಜಿಲ್ಲೆಯ ಭಜನೆ ಕಲಾವಿದ ಮಾರ್ತಾಂಡಪ್ಪ,
  • ಶಿವಮೊಗ್ಗ ಜಿಲ್ಲೆಯ ಹಸೆ ಚಿತ್ತಾರ ಕಲಾವಿದೆ ಗೌರಮ್ಮ,
  • ಮೈಸೂರು ಜಿಲ್ಲೆಯ ಚರ್ಮವಾದ್ಯ ನಗಾರಿ ಕಲಾವಿದ ಸಿ.ಮಂಜುನಾಥ್,
  • ಮಂಡ್ಯ ಜಿಲ್ಲೆಯ ಜಾನಪದ ಗಾಯನ ಕಲಾವಿದ ಹುರುಗಲವಾಡಿ ರಾಮಯ್ಯ,
  • ಹಾಸನ ಜಿಲ್ಲೆಯ ಕೋಲಾಟ ಕಲಾವಿದ ಬಿ.ಟಿ.ಮಾನವ,
  • ಚಿಕ್ಕಮಗಳೂರು ಜಿಲ್ಲೆಯ ಭಜನೆ ಕಲಾವಿದ ಬಿ.ಪಿ.ಪರಮೇಶ್ವರಪ್ಪ
  • ಚಾಮರಾಜನಗರ ಜಿಲ್ಲೆಯ ತಂಬೂರಿ ಪದ ಕಲಾವಿದ ಸಿದ್ದರಾಜು ಆರ್..
  • ದಕ್ಷಿಣ ಕನ್ನಡ ಜಿಲ್ಲೆಯ ಪಾಡ್ಡನ ಕಲಾವಿದೆ ಜಯಂತಿ,
  • ಉಡುಪಿ ಜಿಲ್ಲೆಯ ಜಾನಪದ ಗಾಯನ ಕಲಾವಿದ ಎನ್.ಗಣೇಶ್ ಗಂಗೊಳ್ಳಿ.
  • ಕೊಡಗು ಜಿಲ್ಲೆಯ ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ ಕಲಾವಿದೆ ಎಸ್.ಆರ್.ಸರೋಜ,
  • ಬೆಳಗಾವಿ ಜಿಲ್ಲೆಯ ಚೌಡಕಿ ಪದ ಕಲಾವಿದೆ ಕಮಲಾ ಮರಗನ್ನವರ,
  • ಧಾರವಾಡ ಜಿಲ್ಲೆಯ ಜಾನಪದ ಸಂಗೀತ ಕಲಾವಿದ ಪ್ರಭು ಬಸಪ್ಪ ಕುಂದರಗಿ,
  • ವಿಜಯಪುರ ಜಿಲ್ಲೆಯ ಡೊಳ್ಳುಕುಣಿತ ಕಲಾವಿದ ಸೋಮಣ್ಣ ದುಂಡಪ್ಪ ಧಮಗೊಂಡ
  • ಬಾಗಲಕೋಟೆ ಜಿಲ್ಲೆಯ ಕರಡಿ ಮಜಲು ಕಲಾವಿದ ಗಂಗಪ್ಪ.ಮ.ಕರಡಿ,
  • ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದ ಗಣಪು ಬಡವಾಗೌಡ,
  • ಹಾವೇರಿ ಜಿಲ್ಲೆಯ ಸಂಪ್ರದಾಯದ ಪದ, ಸೋಬಾನೆ ಪದ ಕಲಾವಿದೆ ಗಿರಿಜವ್ವ ಹನುಮಪ್ಪ ಬಣಕಾರ,
  • ಗದಗ ಜಿಲ್ಲೆಯ ಹಗಲು ವೇಷ ಕಲಾವಿದ ಡಾ.ಗೋವಿಂದಪ್ಪ ರಾಮಚಂದ್ರಪ್ಪ,
  • ಕಲಬುರಗಿ ಜಿಲ್ಲೆಯ ತತ್ವಪದ ಕಲಾವಿದೆ ಬೋರಮ್ಮ,
  • ಬೀದರ್ ಜಿಲ್ಲೆಯ ಜನಪದ ಗಾಯನ ಕಲಾವಿದ ಮಾರುತಿ ಕೋಳಿ
  • ಮತ್ತು ಡಾ. ವೆಂಕಟೇಶ್ ಇಂದ್ವಾಡಿ ಅವರಿಗೆ ಡಾ. ಬಿ.ಎಸ್. ಗದ್ದುಗಿಮಠ ಜಾನಪದ ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಗೊಲ್ಲಳ್ಳಿ ಶಿವಪ್ರಸಾದ್ ಮಾಹಿತಿ ನೀಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *