ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್.19 : ಕಷ್ಟ ಕಾಲದಲ್ಲಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಇಂದಿರಾಗಾಂಧಿ ದಿಟ್ಟ ಮಹಿಳೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಇಂದಿರಾಗಾಂಧಿರವರ ಹುಟ್ಟುಹಬ್ಬದ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಬಡವರಿಗಾಗಿ ಅನೇಕ ಯೋಜನೆಗಳನ್ನು ಕೊಟ್ಟ ಇಂದಿರಾಗಾಂಧಿ ದೇಶದ ಐಕ್ಯತೆಗಾಗಿ ಪ್ರಾಣ ತ್ಯಾಗ ಮಾಡಿದರು. ದೇಶ ವಿಭಜನೆಗಾಗಿ ಸಿಖ್ಖರು ಹೋರಾಟ ನಡೆಸಿದ ಸಂದರ್ಭದಲ್ಲಿ ಪಂಜಾಬ್‍ನ ಸ್ವರ್ಣಮಂದಿರದಲ್ಲಿ ಉಗ್ರರು ಅಡಗಿಕೊಂಡಿದ್ದ ಮಾಹಿತಿ ತಿಳಿದ ಇಂದಿರಾಗಾಂಧಿ ಬ್ಲೂಸ್ಟಾರ್ ಆಪರೇಷನ್ ಮೂಲಕ ಸೈನವನ್ನು ನುಗ್ಗಿಸಿ ಉಗ್ರರನ್ನು ಸದೆಬಡಿದ ಕಾರಣಕ್ಕಾಗಿ ಅಂಗರಕ್ಷಕರಿಂದಲೆ ಹತ್ಯೆಗೀಡಾದರು. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ.ಯವರು ಅಪ ಪ್ರಚಾರದಲ್ಲಿ ತೊಡಗಿರುವುದು ಸುಳ್ಳು ಎಂದು ಹೇಳಿದರು.
ಮಹಿಳೆಯೂ ದೇಶ ಆಳಬಹುದು ಎನ್ನುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟ ಇಂದಿರಾಗಾಂಧಿ ಅನೇಕ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆಂದು ಸ್ಮರಿಸಿದರು. ಬಳ್ಳಾರಿ ಜಿಲ್ಲಾ ಮಾಜಿ ಕಾಂಗ್ರೆಸ್ ಅಧ್ಯಕ್ಷ ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಮಾಂಜನೇಯಲು ಮಾತನಾಡಿ ಕಾರ್ಯಕರ್ತರೆ ನಿಜವಾಗಿಯೂ ಪಕ್ಷಕ್ಕೆ ಬಲ.
ಪಕ್ಷಕ್ಕೆ ಯಾರು ಬರುತ್ತಾರೆ ಹೋಗುತ್ತಾರೆನ್ನುವುದು ಮುಖ್ಯವಲ್ಲ. ನಿಷ್ಟೆಯಿಂದ ಯಾರು ಪಕ್ಷಕ್ಕೆ ದುಡಿಯುತ್ತಾರೋ ಅಂತಹವರಿಗೆ ಒಂದಲ್ಲ ಒಂದು ದಿನ ಅಧಿಕಾರ ಸಿಗುತ್ತದೆ. ಅದಕ್ಕಾಗಿ ಪಕ್ಷದ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ ಇಂದಿರಾಗಾಂಧಿ ವಿಶ್ವ ಕಂಡ ಶ್ರೇಷ್ಟ, ದಿಟ್ಟ ಮಹಿಳೆ. ಬಡವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಹದಿನೇಳು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಅವರು ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಿ ಬಡವನು ಬ್ಯಾಂಕ್‍ನಲ್ಲಿ ವ್ಯವಹರಿಸುವಂತ ಅವಕಾಶ ಕಲ್ಪಿಸಿದರು. ಇಂದಿರಾಗಾಂಧಿರವರ ಆಶಯದಂತೆ ರಾಜ್ಯ ಸರ್ಕಾರ ಐದು ಉಚಿತ ಗ್ಯಾರೆಂಟಿಗಳನ್ನು ಜನತೆಗೆ ನೀಡಿದೆ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್ ಮಾತನಾಡಿ ಕಾಂಗ್ರೆಸ್‍ಗೆ ತ್ಯಾಗ ಬಲಿದಾನದ ಇತಿಹಾಸವಿದೆ. ಇಂದಿರಾಗಾಂಧಿಯ ಹಾದಿಯಲ್ಲಿ ಎಲ್ಲರೂ ನಡೆಯಬೇಕಿದೆ ಎಂದರು.
ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡುತ್ತ ಇಂದಿರಾಗಾಂಧಿ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ತುರ್ತು ಪರಿಸ್ಥಿತಿಯನ್ನು ಘೋಷಿಸಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದನ್ನು ಯಾರು ಮರೆಯುವಂತಿಲ್ಲ. ಬಡವರ ಬಗ್ಗೆ ಅಪಾರವಾದ ಕಾಳಜಿಯಿಟ್ಟುಕೊಂಡಿದ್ದ ಇಂದಿರಾಗಾಂಧಿ ಅಂಗರಕ್ಷಕರಿಂದಲೆ ಹತರಾದರು. ಕಾಂಗ್ರೆಸ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಕೋಮುವಾದಿ ಬಿಜೆಪಿ.ಯ ಯಾರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿಲ್ಲ ಎಂದು ನುಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅವುಗಳಲ್ಲಿ ಗರೀಭಿ ಹಠಾವೋ ಮುಖ್ಯವಾದುದು. ಬಡವನು ಬ್ಯಾಂಕ್‍ನಲ್ಲಿ ವ್ಯವಹರಿಸುವಂತೆ ಮಾಡಿದ ಕೀರ್ತಿ ಇಂದಿರಾಗಾಂಧಿಗೆ ಸಲ್ಲುತ್ತದೆ. ಬರಗಾಲದಲ್ಲಿ ವಿದೇಶದಿಂದ ಕೆಂಪು ಜೋಳ, ಗೋಧಿ ತರಿಸಿಕೊಂಡು ಬಡವರ ಹೊಟ್ಟೆ ತುಂಬಿಸಿದರು. ಉಳುವವನೆ ಭೂಮಿಯ ಒಡೆಯ ಎನ್ನುವ ಕಾಯಿದೆ ಜಾರಿಗೆ ತಂದು ಬಡವನೂ ಭೂ ಮಾಲೀಕನಾಗುವಂತೆ ಮಾಡಿದ್ದು, ಇಂದಿರಾಗಾಂಧಿ ಎಂದು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಆರ್.ಪ್ರಕಾಶ್, ಅಸಂಘಟಿತ ಕಾರ್ಮಿಕ ವಿಭಾಗದ ಜಂಟಿ ಕಾರ್ಯದರ್ಶಿ ಪರ್ವಿನ್, ಭಾಗ್ಯಮ್ಮ, ಬಸಮ್ಮ, ನಾಗರಾಜ್ ಪೈಲೇಟ್, ಜಿ.ವಿ.ಮಧುಗೌಡ, ಹೆಚ್.ಶಬ್ಬೀರ್‍ಭಾಷ, ದೇವರಾಜ್, ಪರಮೇಶ್ವರಪ್ಪ ಇನ್ನು ಅನೇಕರು ಇಂದಿರಾಗಾಂಧಿ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದರು.